ಧಾರವಾಡ: ಸಂಭಾವ್ಯ ಕೋವಿಡ್ 3ನೇ ಅಲೆಯನ್ನು ತಡೆಗಟ್ಟಲು ಮುಂಜಾಗೃತಾ ಕ್ರಮವಾಗಿ ಜಿಲ್ಲೆಯ ಎಲ್ಲ ಮಕ್ಕಳನ್ನು ವೈದ್ಯಕೀಯ ತಪಾಸಣೆ ಮಾಡಿಸಲು ಪೋಷಕರಿಗೆ ಸಂಪೂರ್ಣ ಮಾಹಿತಿ ನೀಡಬೇಕು. ಬಾಲಕಾರ್ಮಿಕ ಪದ್ಧತಿ ತಡೆಗೆ ವಿಶೇಷ ಕಾರ್ಯಾಚರಣೆ ಕೈಗೊಳ್ಳಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಆಯುಕ್ತರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಜಿಪಂ ಆಡಳಿತಾಧಿಕಾರಿ ಡಾ.ರವಿಕುಮಾರ ಸುರಪುರ ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ(ಕೆಡಿಪಿ) ಮಾಸಿಕ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಸಂಭಾವ್ಯ ಕೋವಿಡ್ 3ನೇ ಅಲೆ ಮಂಜಾಗೃತಾ ಕ್ರಮವಾಗಿ ಮಕ್ಕಳಿಗೆ ವೈದ್ಯಕೀಯ ಚಿಕಿತ್ಸೆ ಮತ್ತು ಗರ್ಭಿಣಿಯರಿಗೆ ಪೌಷ್ಠಿಕ ಆಹಾರದ ಸಂಪೂರ್ಣ ಮಾಹಿತಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ನೀಡಬೇಕು. ಪೋಷಣ್ ಅಭಿಯಾನ ಯೋಜನೆ ಅಡಿ ಗರ್ಭಿಣಿಯರಿಗೆ ಮಗುವಿನ ಆರೈಕೆ ಮತ್ತು ಪೌಷ್ಠಿಕ ಆಹಾರದ ಸೇವನೆ ಕುರಿತು ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ತಿಂಗಳು ಕನಿಷ್ಠ 2 ಬಾರಿ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ನೀಡಬೇಕು. ಬಾಲಕಾರ್ಮಿಕ ಪದ್ಧತಿ ತಡೆಗೆ ವಿಶೇಷ ಕಾರ್ಯಾಚರಣೆ ಕೈಗೊಂಡು ಅಂತಹ ಹೊಟೇಲ್, ಗ್ಯಾರೇಜುಗಳನ್ನು ಗುರುತಿಸಿ ಮಕ್ಕಳನ್ನು ರಕ್ಷಿಸಬೇಕು, ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.
ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖಾ ಕಾರ್ಯಕ್ರಮ ಹಾಗೂ ಮಾಹಿತಿಯನ್ನು ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರಿಗೆ ನೀಡಲು ತಾಲೂಕಾ ಮಟ್ಟದಲ್ಲಿ ಕಾರ್ಯಾಗಾರ ಹಮ್ಮಿಕೊಳ್ಳಬೇಕು. ನರ್ಸ್, ಎ.ಎನ್.ಎಂ.ಗಳ ಕಾರ್ಯ ನೈಪುಣ್ಯತೆ, ಕೌಶಲ್ಯತೆ ಹೆಚ್ಚಿಸಲು ಪ್ರತಿ ತಿಂಗಳು ಕೌಶಲ ಪರೀಕ್ಷೆ ನಡೆಸಲು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಸೆಕ್ಟರ್ ಹಂತದಲ್ಲಿ ಎಎನ್ಎಂ ಹಾಗೂ ಅಂಗನವಾಡಿ ಕಾರ್ಯಕರ್ತರ ಸಭೆ ಜರುಗಿಸಿ ಪೌಷ್ಟಿಕತೆ ಹಚ್ಚಿಸುವ ಆಹಾರ ಪದಾರ್ಥಗಳ ಪೂರೈಕೆ ಆದ್ಯತೆ ನೀಡಬೇಕು ಎಂದರು.
ತೋಟಗಾರಿಕೆ ವಿವಿ ಅಥವಾ ತಜ್ಞರೊಂದಿಗೆ ಸಮಾಲೋಚಿಸಿ ರೈತರಿಗೆ ಅಕಾಡೆಮಿಕ್ ಮತ್ತು ಕ್ಷೇತ್ರ ಆಧಾರಿತ ತರಬೇತಿಗಳನ್ನು ಏರ್ಪಡಿಸುವ ಕುರಿತು ತೋಟಗಾರಿಕೆ ಇಲಾಖೆಗೆ ಸೂಚನೆ ನೀಡಿದರು.
ಜಿಪಂ ಸಿಇಓ ಡಾ.ಸುಶೀಲಾ. ಬಿ. ಮುಖ್ಯ ಯೋಜನಾಧಿಕಾರಿ ದೀಪಕ್ ಮಡಿವಾಳರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು
Kshetra Samachara
16/08/2021 05:18 pm