ಧಾರವಾಡ: ನಾವೆಲ್ಲರೂ ನಮ್ಮ ಜಿಲ್ಲೆಯನ್ನು ಕುಷ್ಠರೋಗದಿಂದ ಮುಕ್ತಗೊಳಿಸಲು ಪಣತೊಟ್ಟು ಕಾರ್ಯಪ್ರವೃತ್ತರಾಗಿದ್ದೇವೆ. ಕುಷ್ಠರೋಗವನ್ನು ಸುಲಭವಾಗಿ ಪತ್ತೆ ಹಚ್ಚಿ, ಸಂಪೂರ್ಣವಾಗಿ ಗುಣಪಡಿಸಬಹುದು. ನಮ್ಮ ಜಿಲ್ಲೆಯಲ್ಲಿರುವ ಎಲ್ಲಾ ಸಂಪನ್ಮೂಲಗಳನ್ನು ಬಳಸಿಕೊಂಡು ಕುಷ್ಠರೋಗ ಮುಕ್ತ ಜಿಲ್ಲೆ ಎಂಬ ಹೆಗ್ಗಳಿಕೆ ತರಲು ನಾವು ಬದ್ಧರಾಗೋಣ ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುಶೀಲಾ.ಬಿ ಹೇಳಿದರು.
ಅವರು ಇಂದು ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಭವನದಲ್ಲಿ ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ದಿನಾಚರಣೆ ಅಂಗವಾಗಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧೀಜಿಯವರ ಪುಣ್ಯತಿಥಿ ನಿಮಿತ್ತ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಕುಷ್ಠರೋಗ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ, ಮಾತನಾಡಿದರು.
ಕುಷ್ಠ ರೋಗಿಗಳಿಗೆ ಸಾರ್ವಜನಿಕರು ಸೇರಿದಂತೆ ನಮ್ಮಿಂದ ಯಾವುದೇ ರೀತಿಯಾದ ತಾರತಮ್ಯಗಳಾಗದಂತೆ ಎಚ್ಚರ ವಹಿಸೋಣ ಹಾಗೂ ಇತರರಿಂದಲೂ ಯಾವುದೇ ರೀತಿಯಾದ ಶೋಷಣೆಗಳಾಗದಂತೆ ನೋಡಿಕೊಳ್ಳೊಣ. ನಾವೆಲ್ಲರೂ ಒಟ್ಟಾಗಿ, ವೈಯಕ್ತಿಕ ಹಾಗೂ ನಾಗರಿಕ ವ್ಯಕ್ತಿಭಾವದ ಒಗ್ಗಟ್ಟಿನಿಂದ ಸಾಮಾಜಿಕ ಕಳಂಕ-ಪಿಡುಗುಗಳನ್ನು ಹೋಗಲಾಡಿಸಿ, ಕುಷ್ಠ ರೋಗಿಗಳನ್ನು ಮುಖ್ಯವಾಹಿನಿಗೆ ತಂದು, ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆಗೊಳಪಡಿಸಿ ಬಾಪೂಜಿಯವರ ನಂಬಿಕೆ ಮತ್ತು ಸದುದ್ದೇಶಗಳನ್ನು ಸಾಕಾರಗೊಳಿಸಲು ಸನ್ನದ್ದರಾಗಿದ್ದೇವೆ ಎಂದು ಅವರು ಹೇಳಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಯಶವಂತ ಮದೀನಕರ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಶಶಿ ಪಾಟೀಲ, ಡಾ.ಎಸ್.ಎಮ್.ಹೊನಕೇರಿ, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಅಯ್ಯನಗೌಡರ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿದ್ದರು.
Kshetra Samachara
30/01/2021 09:08 pm