ಧಾರವಾಡ: ಧಾರವಾಡದ ಸತ್ತೂರಿನ ಎಸ್.ಡಿ.ಎಮ್. ನಾರಾಯಣ ಹೃದಯಾಲಯದ ವೈದ್ಯರು 55 ವರ್ಷ ವಯಸ್ಸಿನ ವ್ಯಕ್ತಿಗೆ ಮೊದಲನೇ ಬಾರಿಗೆ ಐಸಿಡಿ ಯಶಸ್ವಿಯಾಗಿ ಅಳವಡಿಸುವ ಮೂಲಕ ಹೊಸ ಮೈಲುಗಲ್ಲು ಸಾಧಿಸಿದ್ದಾರೆ.
ನಾರಾಯಣ ಹೃದಯಾಲಯವು ಮೊದಲನೇ ಬಾರಿಗೆ ಐಸಿಡಿ ಯಶಸ್ವಿಯಾಗಿ ಅಳವಡಿಸುವ ಮೂಲಕ ಹೃದಯರೋಗ ಆರೈಕೆಯಲ್ಲಿ ತನ್ನ ಪರಿಣಿತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಹೊಸಪೇಟೆಯ ದೀಪಕ ಆಮ್ಟೆರವರು ಹೆಚ್ಚಾದ ಎದೆಬಡಿತ ಕಾಯಿಲೆ ಹಾಗೂ ತಲೆ ತಿರುಗುವಿಕೆಯಿಂದ ಬಳಲುತ್ತಿದ್ದರು. ದುರ್ಬಲ ರಕ್ತ ಪರಿಚಲನೆಯ ಕಾರ್ಯದಿಂದ ಹೃದಯವು ವಿಸ್ತರಿಸಲ್ಪಟ್ಟಿತ್ತು.
ಅವರಿಗೆ ಎಂಜಿಯೋಗ್ರಾಮ್ ಮಾಡಿ ನೋಡಿದಾಗ ಅದರಲ್ಲಿ ಯಾವುದೇ ತೊಂದರೆ ಕಂಡು ಬಂದಿರಲಿಲ್ಲ. ಆದರೂ ಅವರಿಗೆ ಪದೇ ಪದೇ ಹೆಚ್ಚಿನ ಎದೆ ಬಡಿತದ ತೊಂದರೆ ಕಾಣಿಸುತ್ತಿತ್ತು.
ಆಗ ಹೊಸಪೇಟೆಯ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅವರ ಇ.ಸಿ.ಜಿ. ಹೆಚ್ಚಾದ ಹೃದಯ ಬಡಿತವನ್ನು ತೋರಿಸುತ್ತಿತ್ತು. ಅದು ನಿಮಿಷಕ್ಕೆ ಸುಮಾರು 250 ವೇಗದ ಹೃದಯ ಬಡಿತವನ್ನು ತೋರಿಸಿತ್ತು.
ಇದು ಕಡಿಮೆ ರಕ್ತದೊತ್ತಡಕ್ಕೆ ಸಂಬಂಧಿಸಿದಾಗಿದ್ದು, ಬಾಹ್ಯ ಡಿಪಿಬ್ರಿಲೇಟರ್ ಶಾಕ್ ಕೊಡುವುದರೊಂದಿಗೆ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಹೀಗಾಗಿ ಹಿರಿಯ ಹೃದಯ ರೋಗ ವೈದ್ಯರಾದ ಡಾ.ವಿ.ಎಸ್. ಪ್ರಕಾಶ, ಡಾ.ವಿವೇಕಾನಂದ ಗಜಪತಿ, ಡಾ.ಲಕ್ಷ್ಮೀ ಆರ್. ಪಾಟೀಲ ಅವರನ್ನು ಒಳಗೊಂಡ ತಂಡವು ಚಿಕಿತ್ಸೆಯನ್ನು ಯಶಸ್ವಿಯಾಗಿ ನೀಡಿದೆ.
ಈ ರೋಗಿಯ ಚಿಕಿತ್ಸೆಯ ವಿಧಾನವನ್ನು ವಿವರಿಸಿದ ಎಸ್.ಡಿ.ಎಮ್. ನಾರಾಯಣ ಹಾರ್ಟ್ ಸೆಂಟರನ ಹೃದಯರೋಗ ತಜ್ಞರಾದ ಡಾ. ವಿವೇಕಾನಂದ ಗಜಪತಿ ಅವರು, ರೋಗಿಯು ನಮ್ಮ ಬಳಿಗೆ ಬಂದಾಗ ನಾವು ಇಂಪ್ಲಾಂಟ್ ಮಾಡಬಹುದಾದ ಕಾರ್ಡಿಯೋಒವರ್ ಡಿಪಿಬ್ರಿಲೇಟರ್ (ಐಸಿಡಿ)ಗೆ ಸಲಹೆ ನೀಡಿದ್ದೇವು. ನಾವು ಈ ಪೇಸ್ಮೇಕರ್ ಅನ್ನು ಚರ್ಮದ ಕೆಳಗಿರುವ ಎಡಕಾಲರ್ ಮೂಳೆಯ ಕೆಳಗೆ ಹೃದಯದ ಕೋಣೆಗೆ ಹೋಗುವ ಸೀಸದೊಂದಿಗೆ ಅಳವಡಿಸಿದ್ದೇವೆ. ಈ ಸಾಧನವು ಅಸಹಜ ವೇಗದ ಹೃದಯ ಬಡಿತವನ್ನು ಪತ್ತೆ ಮಾಡುತ್ತದೆ.
ಇದು ಒಮ್ಮಿಂದೊಮ್ಮೆಲೆ ಹೃದಯ ಸ್ತಂಬನಕ್ಕೆ ಕಾರಣವಾಗಬಹುದಾದ ಮತ್ತು ವೇಗ ಗತಿಯ ಅಥವಾ ಆಘಾತಗಳಿಂದ ಅವುಗಳನ್ನು ಸ್ಥಗಿತಗೊಳಿಸುತ್ತದೆ.
ಹೃದಯ ಬಡಿತ ನಿಧಾನವಾಗಿದ್ದರೆ ಅದು ಸರಳ ಪೇಸ್ಮೇಕರ್ ಆಗಿ ಕಾರ್ಯನಿರ್ವಹಿಸುತ್ತದೆ. ಬ್ಯಾಟರಿ ಅವಧಿಯು ಸುಮಾರು 5 ರಿಂದ 10 ವರ್ಷಗಳು ಇರುತ್ತದೆ. ನಂತರ ಅದನ್ನು ಬದಲಾಯಿಸಬಹುದು ಎಂದು ತಿಳಿಸಿದರು.
ಚಿಕಿತ್ಸೆ ಪಡೆದು ಗುಣಮುಖರಾಗಿರುವ ದೀಪಕ ಆಮ್ಟೆ ಮಾತನಾಡಿ, ವೈದ್ಯರು ನನಗೆ ಅತ್ಯಂತ ಸೂಕ್ತವಾದ ಚಿಕಿತ್ಸಾ ಆಯ್ಕೆಯೊಂದಿಗೆ ಉತ್ತಮವಾಗಿ ಚಿಕಿತ್ಸೆ ನೀಡಿದ್ದಾರೆ ಎಂದರು.
Kshetra Samachara
29/12/2020 07:27 pm