ಹುಬ್ಬಳ್ಳಿ: ಕಂದನನ್ನು ಕಾಪಾಡಿ ಎಂದು ವೈದ್ಯರ ಬಳಿ ಬಂದ ಪೋಷಕರಿಗೆ ನಿರಾಸೆಯಾಗಿದೆ. ಹೆತ್ತವರನ್ನು ಕಂದ ಕೈ ಬಿಡುತ್ತಿದ್ದಂತೆ ಪಾಲಕರ ರೋಷಾಗ್ನಿ ಹೆಚ್ಚಾಗಿ 'ವೈದ್ಯರೇ ನಿಮಗೆ ಎಷ್ಟು ದುಡ್ಡು ಬೇಕು ಹೇಳಿ ಕೊಡ್ತೀವಿ ನಮಗೆ ನಮ್ಮ ಮಗು ಬೇಕು ಅಷ್ಟೇ' ಎಂದು ಪಟ್ಟು ಹಿಡಿದು ಕುಳಿತ ಘಟನೆ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ನಡೆದಿದೆ.
ಹೌದು.. ವಿಡಿಯೋದಲ್ಲಿ ಕಿಲಕಿಲ ನಗುತ್ತಾ ಆಸ್ಪತ್ರೆಯ ಬೆಡ್ ಮೇಲೆ ಕುಣಿಯುತ್ತಿರೋ ಈ ಮಗುವಿನ ಹೆಸರು ರಕ್ಷಾ ಚೌಧರಿ. ಎರಡುವರೆ ವರ್ಷದ ಈ ಕಂದನಿಗೆ ರಕ್ತ ನಾಳದ ಸಮಸ್ಯೆಯಿಂದಾಗಿ ಪೋಷಕರು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್‌ಗೆ ದಾಖಲಿಸಿದ್ದರು. ಆದರೆ ಈಗ ಕಂದ ಬದುಕಿಲ್ಲ. ನಮ್ಮ ಕಂದನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಪೋಷಕರು ವೈದ್ಯರ ವಿರುದ್ಧ ಆಕ್ರೋಶ ಹೊರಹಾಕಿದರು.
ಹುಬ್ಬಳ್ಳಿಯ ಉಣಕಲ್ ಮೂಲದ ಸಂಜೀವ ಮತ್ತು ಕೀರ್ತಿ ದಂಪತಿಯ ಮಗು ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿತ್ತು. ಆಸ್ಪತ್ರೆಯಲ್ಲಿ ಲವಲವಿಕೆಯಿಂದ ಇದ್ದ ಮಗು ಶಸ್ತ್ರ ಚಿಕಿತ್ಸೆ ಬಳಿಕ ಆರೋಗ್ಯದಲ್ಲಿ ಏರುಪೇರಾಗಿ ನಿನ್ನೆ ಶುಕ್ರವಾರ ಬೆಳಗ್ಗೆ ಮೃತಪಟ್ಟಿದೆ. ಇನ್ನು ಮಗು ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಪೋಷಕರು ಆಕ್ರೋಶವನ್ನು ಹೊರಹಾಕಿದರು.
ಸದ್ಯ ಪೋಷಕರ ಆರೋಪವನ್ನು ತಳ್ಳಿಹಾಕಿದ ಕಿಮ್ಸ್ ಡೈರೆಕ್ಟರ್ ರಾಮಲಿಂಗಪ್ಪ ಅವರು, ನಮ್ಮ ಕಡೆಯಿಂದ ಎಷ್ಟು ಸಾಧ್ಯವೋ ಅಷ್ಟು ಪ್ರಾಮಾಣಿಕವಾಗಿ ಮಗುವನ್ನು ಉಳಿಸಲು ಪ್ರಯತ್ನಿಸಿದ್ದೇವೆ. ಇದರಲ್ಲಿ ನಮ್ಮ ನಿರ್ಲಕ್ಷ್ಯ ಇಲ್ಲ ಪೋಷಕರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದಿದ್ದಾರೆ. ಅದೇನೆ ಇರಲಿ ಚಿಕಿತ್ಸೆಗೆಂದು ಬಂದ ಮಗು ಮಸಣ ಸೇರಿದ್ದು ಮಾತ್ರ ನೋವಿನ ಸಂಗತಿ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
19/02/2022 08:40 am