ಧಾರವಾಡ: ಕೊರೊನಾ ಮೂರನೇ ಅಲೆ ಜೋರಾಗಿಯೇ ಸದ್ದು ಮಾಡುತ್ತಿದೆ. ರಾಜ್ಯ ಮತ್ತು ದೇಶದಾದ್ಯಂತ ನಿರೀಕ್ಷೆಗೂ ಮೀರಿ ಸೋಂಕು ಹೆಚ್ಚಳವಾಗುತ್ತಿದೆ. ಹೀಗಿರುವಾಗ ಜನರೇ ಸ್ವಯಂ ಪ್ರೇರಣೆಯಿಂದ ಜಾಗೃತರಾಗಬೇಕಿದೆ. ಇದರ ಮಧ್ಯೆ ಗದಗ ಜಿಲ್ಲೆ ರೋಣ ತಾಲೂಕಿನ ಕರ್ಕಿಕಟ್ಟಿ ಗ್ರಾಮದ ವ್ಯಕ್ತಿಯೊಬ್ಬರು ವಿಭಿನ್ನ ರೀತಿಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಹೀಗೆ ಕನ್ನಡ ಬಾವುಟದ ಬಣ್ಣಗಳಾದ ಹಳದಿ ಹಾಗೂ ಕೆಂಪು ಬಣ್ಣದ ಬಟ್ಟೆ ತೊಟ್ಟಿರುವ ಈ ವ್ಯಕ್ತಿಯ ಹೆಸರು ಮುತ್ತಣ್ಣ ತಿರ್ಲಾಪುರ. ಕನ್ನಡದ ಭಾಷೆ ಮೇಲೆ ಅತೀವ ಗೌರವ ಹೊಂದಿರುವ ಇವರು ತಾವು ತೊಟ್ಟ ಬಟ್ಟೆ ಮೇಲೆ ಕನ್ನಡದ ವಿವಿಧ ವ್ಯಾಖ್ಯಾನಗಳನ್ನು ಹಾಕಿಸಿದ್ದಾರೆ. ಹೀಗೆ ಬಟ್ಟೆ ತೊಟ್ಟು ಕನ್ನಡ ಭಾಷಾಭಿಮಾನ ಮೆರೆಯುವ ಮೂಲಕ ಕೊರೊನಾ ಮೂರನೇ ಅಲೆ ಬಗ್ಗೆಯೂ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಹಲಗೆ ಬಾರಿಸಿ, ಜನರಿಗೆ ಕೊರೊನಾ ಜಾಗೃತಿ ಬಗೆಗಿನ ಕರಪತ್ರಗಳನ್ನು ಹಂಚಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಕರ್ಕಿಕಟ್ಟಿ ಗ್ರಾಮದಲ್ಲಿ ತಮ್ಮದೇ ಚಿಕ್ಕ ಹೋಟೆಲ್ ಹೊಂದಿರುವ ಇವರು, ಉದ್ಯೋಗ ಇದ್ದರೂ ಊರೂರು ಸುತ್ತಿ ಜನರನ್ನು ಜಾಗೃತಗೊಳಿಸುತ್ತಿದ್ದಾರೆ. ಈಗಾಗಲೇ ಅನೇಕ ಊರುಗಳನ್ನು ಸುತ್ತಿ ಬಂದಿರುವ ಇವರು ಎರಡು ಸಾವಿರಕ್ಕೂ ಅಧಿಕ ಜಾಗೃತಿ ಕರಪತ್ರಗಳನ್ನು ಹಂಚಿದ್ದಾರೆ. ಧಾರವಾಡಕ್ಕೂ ಬಂದಿದ್ದ ಮುತ್ತಣ್ಣ ನಗರದ ಪ್ರಮುಖ ಜನಸಂದಣಿ ಪ್ರದೇಶಗಳಲ್ಲಿ ಸಂಚರಿಸಿ, ಹಲಗೆ ಬಾರಿಸಿ, ಕರಪತ್ರಗಳನ್ನೂ ನೀಡಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
ಹೀಗೇಕೆ ಮಾಡುತ್ತೀರಿ ಎಂದು ಅವರನ್ನು ಪ್ರಶ್ನಿಸಿದರೆ, ಮಾನವ ಜನ್ಮ ದೊಡ್ಡದು. ಇರುವುದೊಂದೇ ಜೀವ. ಪದೇ ಪದೇ ಹುಟ್ಟಿ ಬರುವುದಿಲ್ಲ. ಇದ್ದಾಗ ಜೋಪಾನವಾಗಿ ಜೀವವನ್ನು ರಕ್ಷಿಸಿಕೊಳ್ಳಬೇಕು, ರೋಗ, ರುಜಿನಗಳಿಂದ ದೂರ ಇರಬೇಕು. ಜನ ಇದನ್ನು ಅರಿತುಕೊಳ್ಳಲೆಂದೇ ಈ ರೀತಿಯ ಕೆಲಸ ಮಾಡುತ್ತಿದ್ದೇನೆ ಎನ್ನುತ್ತಾರೆ.
ಏನೇ ಆಗಲಿ ಯಾವುದೇ ಫಲಾಪೇಕ್ಷೆ ಇಲ್ಲದೇ ಜನರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಮುತ್ತಣ್ಣ ಅವರಿಗೆ ನಾವೂ ಒಂದು ಹ್ಯಾಟ್ಸಪ್ ಹೇಳಲೇಬೇಕಲ್ಲವೇ?
Kshetra Samachara
11/01/2022 01:36 pm