ಧಾರವಾಡ: ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಜಿಲ್ಲಾಡಳಿತ ಕೋವಿಡ್ ಸೋಂಕಿತರ ಮತ್ತು ಶಂಕಿತರ ಪರೀಕ್ಷೆ, ಚಿಕಿತ್ಸೆಗೆ ಅನುಕೂಲವಾಗುವಂತೆ ದಿನದ 24 ಗಂಟೆ ತೆರೆದಿರುವ ಹೊರರೋಗಿ ಚಿಕಿತ್ಸಾ (ಓಪಿಡಿ) ಕೌಂಟರ್‌ಗಳನ್ನು ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಆರಂಭಿಸಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೋವಿಡ್ ಲಕ್ಷಣ ಹೊಂದಿರುವ ಮತ್ತು ಲಕ್ಷಣ ಇಲ್ಲದಿರುವ ಸೋಂಕಿತರು ಕೋವಿಡ್ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲಿಸದೇ ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುವುದರಿಂದ ಸೋಂಕು ಇತರರಿಗೆ ಹರಡುವ ಮತ್ತು ಹೆಚ್ಚಳವಾಗುವ ಸಾಧ್ಯತೆ ಇರುತ್ತದೆ. ಅಂತವರ ಸಂಚಾರ ಕಡಿಮೆ ಮಾಡಲು, ಗಂಟಲು ದ್ರವ ಸಂಗ್ರಹ, ಫೀವರ್ ಕ್ಲಿನಿಕ್ ಹಾಗೂ ಓಪಿಡಿ ಘಟಕಗಳನ್ನು ವಿವಿಧ ಸ್ಥಳಗಳಲ್ಲಿ ವಿಕೇಂದ್ರೀಕರಿಸಿ ಆರಂಭಿಸಲಾಗಿದೆ.
ಕೋವಿಡ್ ಸೋಂಕಿತರು, ಸೋಂಕಿನ ಲಕ್ಷಣ ಹೊಂದಿರುವ ಮತ್ತು ಲಕ್ಷಣ ಹೊಂದಿರದ ಸೋಂಕಿತರು ತಮಗೆ ಸಮೀಪದ ಕೇಂದ್ರಗಳಿಗೆ ಭೇಟಿ ನೀಡಿ ಚಿಕಿತ್ಸೆ, ಔಷಧಿ ಪಡೆಯಬಹುದಾಗಿದೆ.
24 ಗಂಟೆ ತೆರೆದಿರುವ ಓಪಿಡಿ ಕೌಂಟರ್: ಕೋವಿಡ್ ಸೋಂಕಿತರು ಮತ್ತು ಶಂಕಿತರಿಗೆ ಚಿಕಿತ್ಸೆ ಹಾಗೂ ಔಷಧಿ ನೀಡಲು ದಿನದ 24 ಗಂಟೆ ಸೇವೆಗೆ ಲಭ್ಯವಿರುವ 7 ಕೇಂದ್ರಗಳನ್ನು ಜಿಲ್ಲಾಡಳಿತ ಆರಂಭಿಸಿದೆ.
ಜಿಲ್ಲಾ ಆಸ್ಪತ್ರೆ, ಹುಬ್ಬಳ್ಳಿಯ ಕಿಮ್ಸ್, ರೈಲ್ವೆ ಆಸ್ಪತ್ರೆ, ಚಿಟಗುಬ್ಬಿ ಆಸ್ಪತ್ರೆ ಮತ್ತು ಕೋವಿಡ್‍ಕೇರ್ ಸೆಂಟರ್‌ಗಳಾದ ಹುಬ್ಬಳಿಯ ಅಂಜುಮನ್ ಹಾಸ್ಟೆಲ್, ಸಂಗೊಳ್ಳಿ ರಾಯಣ್ಣ ನಗರದ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ಹಾಗೂ ಅಂಚಟಗೇರಿಯ ಮೊರಾರ್ಜಿ ದೇಸಾಯಿ ವಸತಿ ನಿಲಯಗಳಲ್ಲಿ ಹೊರ ರೋಗಿ ಚಿಕಿತ್ಸಾ (ಓಪಿಡಿ) ಕೌಂಟರ್ ತೆರೆಯಲಾಗಿದ್ದು, ಅಲ್ಲಿ ವೈದ್ಯರು ಆರೋಗ್ಯ ಸೇವೆ, ಔಷಧಿಗಳನ್ನು ನೀಡುತ್ತಿದ್ದಾರೆ.
24 ಗಂಟೆ ತೆರೆದಿರುವ ಫೀವರ್ ಕ್ಲಿನಿಕ್: ಜಿಲ್ಲಾ ಆಸ್ಪತ್ರೆ, ಕಿಮ್ಸ್ ಆಸ್ಪತ್ರೆ, ಚಿಟಗುಬ್ಬಿ ಆಸ್ಪತ್ರೆ, ರೈಲ್ವೆ ಆಸ್ಪತ್ರೆ, ಮತ್ತು ಎಸ್ಡಿಎಂ ಖಾಸಗಿ ಆಸ್ಪತ್ರೆಯಲ್ಲಿ 24 ಗಂಟೆ ಸೇವೆ ನೀಡುವ ಫೀವರ್ ಕ್ಲಿನಿಕ್‍ಗಳನ್ನು ತೆರೆಯಲಾಗಿದೆ. ಇಲ್ಲಿ ಸೋಂಕಿತರ ಸ್ವ್ಯಾಬ್ ಸಂಗ್ರಹ ಮಾಡಿ ಪ್ರಾಥಮಿಕ ಚಿಕಿತ್ಸೆ, ಔಷಧಿ ನೀಡಲಾಗುತ್ತದೆ.
58 ಸ್ವ್ಯಾಬ್ ಸಂಗ್ರಹ ಕೇಂದ್ರಗಳು: ಜಿಲ್ಲೆಯ 51 ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಕಲಘಟಗಿ, ಕುಂದಗೋಳ, ನವಲಗುಂದ ತಾಲೂಕು ಆಸ್ಪತ್ರೆಗಳು ಹಾಗೂ ರೈಲ್ವೆ ಆಸ್ಪತ್ರೆಗಳಲ್ಲಿ ಮತ್ತು ಎಸ್ಡಿಎಂ ಖಾಸಗಿ ಆಸ್ಪತ್ರೆಯಲ್ಲಿ ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ಸ್ವ್ಯಾಬ್ ಸಂಗ್ರಹ ಮಾಡಲಾಗುತ್ತದೆ ಮತ್ತು ಜಿಲ್ಲಾ ಆಸ್ಪತ್ರೆ, ಕಿಮ್ಸ್, ರೈಲ್ವೆ ಆಸ್ಪತ್ರೆಗಳಲ್ಲಿ ದಿನದ 24 ಗಂಟೆ ಸ್ವ್ಯಾಬ್ ಸಂಗ್ರಹ ವ್ಯವಸ್ಥೆ ಮಾಡಿದೆ. ಒಟ್ಟು 58 ಸ್ಥಳಗಳಲ್ಲಿ ಸ್ವ್ಯಾಬ್ ಸಂಗ್ರಹಿಸಲಾಗುತ್ತದೆ. ಇದರೊಂದಿಗೆ ಸ್ವ್ಯಾಬ್ ಸಂಗ್ರಹಕ್ಕಾಗಿ 5 ಸಂಚಾರಿ ವಾಹನಗಳನ್ನು ಸಜ್ಜುಗೊಳಿಸಿದ್ದು, ಪ್ರತಿ ತಾಲೂಕಿಗೆ ತಲಾ ಒಂದು ವಾಹನ ನೀಡಲಾಗಿದೆ.
ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವುದರ ಜೊತೆಗೆ ವಿವಿಧ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು, ಸೌಲಭ್ಯಗಳನ್ನು ನೀಡುತ್ತಿದೆ. ಜಿಲ್ಲೆಯ ಸಾರ್ವಜನಿಕರು ಸಹಕಾರ ನೀಡಬೇಕು. ಮತ್ತು ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
20/01/2022 07:49 pm