ಕಲಘಟಗಿ: ಧಾರವಾಡ ಜಿಲ್ಲೆಗೆ ಸಹಾಯಕ ಆಯುಕ್ತರಾಗಿ ಕೆಎಎಸ್ ಅಧಿಕಾರಿ ಅಶೋಕ ತೇಲಿ ಅವರು ಅಧಿಕಾರ ವಹಿಸಿಕೊಂಡ ಒಂದು ವಾರದ ಒಳಗೆ ಕಲಘಟಗಿ ಪಟ್ಟಣಕ್ಕೆ ಭೇಟಿ ನೀಡಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಸಹಾಯಕ ಆಯುಕ್ತರು ತಾಲೂಕಾವಾರು ಭೇಟಿ ನೀಡುತ್ತಿದ್ದಾರೆ. ಅದರಂತೆ ಇಂದು ಕಲಘಟಗಿ ಪಟ್ಟಣಕ್ಕೆ ಭೇಟಿ ನೀಡಿ ಇಲ್ಲಿನ ಪರಿಸ್ಥಿತಿ ಗಮನಿಸಿದ್ದಾರೆ.
ಕಲಘಟಗಿ ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಎಸಿ ಅಶೋಕ್ ತೇಲಿ ಅವರು ಇಲ್ಲಿನ ಆಸ್ಪತ್ರೆಯ ಸಮಸ್ಯೆ ಹಾಗೂ ಕೊರೊನ ರೋಗಿಗಳಿಗೆ ಆಕ್ಸಿಜನ್ ಬೆಡ್ ಕುರಿತಾಗಿ ಮಾಹಿತಿ ಪಡೆದುಕೊಂಡರು.ಈಗಾಗಲೇ 50 ಕ್ಕೂ ಹೆಚ್ಚು ಆಕ್ಸಿಜನ್ ಬೆಡ್‌ಗಳನ್ನ ಕಲಘಟಗಿ ತಾಲೂಕು ಆಸ್ಪತ್ರೆಯಲ್ಲಿ ನಿರ್ಮಾಣ ಮಾಡಲಾಗಿದ್ದು,ಆಸ್ಪತ್ರೆಯಲ್ಲಿ ಕೋವಿಡ್ ಕೇರ್ ಸೆಂಟರ್ ಕೂಡ ತೆರೆಯಲಾಗಿದೆ.ಅಲ್ಲದೇ ಯಾವುದೇ ರೀತಿ ಕೊರೊನ ರೋಗಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಆರೋಗ್ಯ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.
ಇನ್ನೂ ಕಲಘಟಗಿ ಪಟ್ಟಣದ ಸ್ವಚ್ಛತೆ ಬಗ್ಗೆ ಮಾಹಿತಿ ಪಡೆದ ಅಶೋಕ್ ತೇಲಿ ಅವರು ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈಗಾಗಲೇ ಕಸ ವಿಲೇವಾರಿ ಘಟಕದಲ್ಲಿ ಕಸ ಗೊಬ್ಬರವಾಗುತ್ತಿದ್ದು,ಮುಂದಿನ ದಿನಗಳಲ್ಲಿ ಅದನ್ನ ಸಮರ್ಪಕವಾಗಿ ಬಳಸಿಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಅಲ್ಲದೇ ನಗರದಲ್ಲಿ ಹೆಚ್ಚಾಗಿ ಸ್ವಚ್ಛತೆಯನ್ನ ಕಾಪಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆಯನ್ನ ನೀಡಿದ್ದಾರೆ.
ಸಹಾಯಕ ಆಯುಕ್ತ ಅಶೋಕ ತೇಲಿ ಅವರ ಜೊತೆ ತಹಶೀಲ್ದಾರ್ ಯಲ್ಲಪ್ಪ ಗೊಣ್ಣೆನ್ನವರ,ಆರೋಗ್ಯ ಅಧಿಕಾರಿ ಬಸವರಾಜ್ ಬಾಸೂರು, ಪಟ್ಟಣ ಪಂಚಾಯತಿ ಅಧಿಕಾರಿ ವೈ.ಜಿ ಗದ್ದಿಗೌಡರ ಹಾಗೂ ತಾಲೂಕು ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
Kshetra Samachara
19/01/2022 11:05 am