ಹುಬ್ಬಳ್ಳಿ: ಕಿಲ್ಲರ್ ಕೊರೋನಾ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೂ ಕೂಡ ಜನರು ನಿಷ್ಕಾಳಜಿ ವಹಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಪಾಲಿಕೆ ಸಿಬ್ಬಂದಿಗಳು ಹಾಗೂ ಮಾರ್ಷಲ್ ಗಳು ಅಂಗಡಿ ಮಾಲೀಕರಿಗೆ ಮತ್ತು ಸಾರ್ವಜನಿಕರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ.
ಹುಬ್ಬಳ್ಳಿಯ ಮೇದಾರ ಓಣಿ, ದಾಜೀಬಾನ್ ಪೇಟೆ, ದುರ್ಗದಬೈಲ್ ಹಾಗೂ ಉಳ್ಳಾಗಡ್ಡಿಮಠ ಮಾರ್ಗದ ಹತ್ತಿರದಲ್ಲಿರುವ ಕೋವಿಡ್ ನಿಯಮ ಉಲ್ಲಂಘನೆ ಮಾಡಿದ ಅಂಗಡಿಗಳಿಗೆ ಹಾಗೂ ಮಾಸ್ಕ್ ಹಾಕದೇ ಓಡಾಡುವವರಿಗೆ ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.
ಮಾಸ್ಕ್ ಹಾಕದೇ ಓಡಾಡುವವರಿಗೆ 250 ರೂಪಾಯಿ ಹಾಗೂ ಅಂಗಡಿ ಮುಂಗಟ್ಟುಗಳಲ್ಲಿ ಸಾಮಾಜಿಕ ಅಂತರ ಕಾಪಾಡದೇ ಕೋವಿಡ್ ನಿಯಮ ಉಲ್ಲಂಘನೆ ಮಾಡಿದ ಅಂಗಡಿ ಮಾಲೀಕರಿಗೆ 5000 ರೂಪಾಯಿ ದಂಡ ವಿಧಿಸುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.
ಒಟ್ಟಿನಲ್ಲಿ ಸಾರ್ವಜನಿಕರು ತಮ್ಮ ಆರೋಗ್ಯವನ್ನು ತಾವು ಕಾಪಾಡಿಕೊಳ್ಳಲು ಅಧಿಕಾರಿಗಳೇ ರಸ್ತೆಗೆ ಇಳಿದು ದಂಡ ವಿಧಿಸಿ ಆರೋಗ್ಯ ಕಾಪಾಡಿಕೊಳ್ಳಿ ಎಂದು ಹೇಳುವಂತ ಪರಿಸ್ಥಿತಿ ನಿರ್ಮಾಣವಾಗಿರುವುದು ನಿಜಕ್ಕೂ ವಿಪರ್ಯಾಸಕರ ಸಂಗತಿಯಾಗಿದೆ.
Kshetra Samachara
12/01/2022 08:37 pm