ಹುಬ್ಬಳ್ಳಿ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಒಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಕೋವಿಡ್ ಮೂರನೇ ಅಲೆ ವ್ಯಾಪಿಸುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ರಾಜ್ಯಾದ್ಯಂತ ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 5:00 ವರೆಗೆ ವಾರಂತ್ಯ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಲಾಗಿದೆ.
ಕೋವಿಡ್ ಮಾರ್ಗಸೂಚಿ ನಿರ್ದೇಶನಗಳ ಪ್ರಕಾರ ವಾರಂತ್ಯ ಕರ್ಫ್ಯೂ ಅವಧಿಯಲ್ಲಿ ಸಾರ್ವಜನಿಕ ಸಾರಿಗೆಗೆ ಅವಕಾಶ ಕಲ್ಪಿಸಲಾಗಿರುತ್ತದೆ. ಹುಬ್ಬಳ್ಳಿ ಗ್ರಾಮಾಂತರ ವಿಭಾಗದ ವ್ಯಾಪ್ತಿಯ ಎಲ್ಲಾ ಬಸ್ ಡಿಪೋಗಳು ಮತ್ತು ಬಸ್ ನಿಲ್ದಾಣಗಳಿಂದ ಬಸ್‌ಗಳ ಸಂಚಾರ ಎಂದಿನಂತೆ ಇರುತ್ತದೆ. ಆದರೆ ವಾಣಿಜ್ಯ ವಹಿವಾಟುಗಳಿಗೆ ನಿರ್ಬಂಧ ಇರುವ ಕಾರಣ ಪ್ರಯಾಣಿಕರ ಸಂಖ್ಯೆಯಲ್ಲಿ ಬಹಳಷ್ಟು ಕಡಿಮೆಯಾಗುವ ಸಂಭವ ಇರುತ್ತದೆ. ಈ ಹಿನ್ನೆಲೆಯಲ್ಲಿ ನಗರದ ಗೋಕುಲ ರಸ್ತೆ ಹೊಸ ಬಸ್ ನಿಲ್ದಾಣ, ಹೊಸೂರು ಬಸ್ ನಿಲ್ದಾಣ, ನವಲಗುಂದ, ಅಣ್ಣಿಗೇರಿ, ಕಲಘಟಗಿ, ಕುಂದಗೋಳ, ತಡಸ ಮತ್ತಿತರ ಪ್ರಮುಖ ಬಸ್ ನಿಲ್ದಾಣ ಗಳಿಂದ ಪ್ರಯಾಣಿಕರ ಬೇಡಿಕೆ ಇರುವ ಮಾರ್ಗಗಳಲ್ಲಿ ಅವಶ್ಯಕತೆಗೆ ತಕ್ಕಂತೆ ಬಸ್ ಕಾರ್ಯಾಚರಣೆ ಮಾಡಲಾಗುತ್ತದೆ ಎಂದು ವಾಕರಸಾ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
Kshetra Samachara
07/01/2022 08:14 pm