ಹುಬ್ಬಳ್ಳಿ: ಇಲ್ಲಿನ ವರೂರಿನ ಹೋಟೆಲ್ ಒಂದರಲ್ಲಿ ಪೂರೈಸಿದ್ದ ಪೂರಿಬಾಜಿಯಲ್ಲಿ ಬೆಂದ ಹಲ್ಲಿ ಬಿದ್ದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಗ್ರಾಹಕರಿಗೆ ಒಟ್ಟು 90 ಸಾವಿರ ರೂ.ಗಳ ಪರಿಹಾರ ನೀಡಲು ಹೋಟೆಲ್ ಮಾಲೀಕರಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
2018 ರ ಸೆ.26 ರಂದು ಹುಬ್ಬಳ್ಳಿಯ ವರೂರಿನ ಕಾಮತ್ ಉಪಚಾರ ಹೋಟೆಲ್‌ಗೆ ಬೆಳಗಿನ ಉಪಹಾರಕ್ಕಾಗಿ ಹೋಗಿದ್ದ ಗ್ರಾಹಕರಾದ ವಿನಾಯಕ ಮತ್ತು ಸಹನಾ ಅವರು, ಪೂರಿ ಭಾಜಿ ತಿಂಡಿಗೆ ಆದೇಶಿಸಿದ್ದರು. ಪೂರೈಸಿದ ಉಪಹಾರದಲ್ಲಿ ಬೆಂದ ಹಲ್ಲಿ ಇರುವುದನ್ನು ಗಮನಿಸಿದ ಇಬ್ಬರೂ ಗ್ರಾಹಕರು ಹೋಟೆಲ್ ಸಿಬ್ಬಂದಿಯ ಗಮನಕ್ಕೆ ತಂದರು. ಸಿಬ್ಬಂದಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ವಿಷಪೂರಿತ ಉಪಹಾರ ಸೇವಿಸಿದ್ದ ಗ್ರಾಹಕ ವಿನಾಯಕ ಅವರಿಗೆ ಹೊಟ್ಟೆನೋವು, ವಾಂತಿ ಕಾಣಿಸಿಕೊಂಡ ಕಾರಣ ಶಿಗ್ಗಾಂವ ಹಾಗೂ ಹುಬ್ಬಳ್ಳಿಯ ತತ್ವದರ್ಶ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದರು.
ಈ ಕುರಿತು ಧಾರವಾಡದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿದರು. ದೂರಿನ ವಿಚಾರಣೆ ನಡೆಸಿದ ಆಯೋಗವು ಕಾಮತ್ ಉಪಚಾರ ಹೊಟೇಲ್‌ನವರಿಂದ ಗ್ರಾಹಕರಿಗೆ ಸೇವಾ ನ್ಯೂನ್ಯತೆ ಆಗಿದೆ ಎಂದು ತೀರ್ಮಾನಿಸಿ, ಹೊಟೇಲ್‌ನವರು ಇಬ್ಬರೂ ಗ್ರಾಹಕರಿಗೆ ಒಟ್ಟು ರೂ .90 ಸಾವಿರ ರೂ. ಪರಿಹಾರ ನೀಡಬೇಕೆಂದು ಆಯೋಗದ ಅಧ್ಯಕ್ಷರಾದ ಈಶಪ್ಪ ಭೂತೆ ಹಾಗೂ ಸದಸ್ಯರಾದ ಪಿ.ಸಿ.ಹಿರೇಮಠ ಮತ್ತು ವಿ.ಎ. ಬೋಳಶೆಟ್ಟಿ ರವರು ತೀರ್ಪು ನೀಡಿ ಆದೇಶ ಹೊರಡಿಸಿದ್ದಾರೆ.
Kshetra Samachara
11/04/2022 07:05 pm