ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಜಾನುವಾರುಗಳಲ್ಲಿ ಚರ್ಮ ಗಂಟು ರೋಗ ಉಲ್ಬಣವಾಗಿರುವುದರಿಂದ ರೋಗ ಹರಡುವುದನ್ನು ತಡೆಗಟ್ಟಲು ಮುಂಜಾಗೃತಾ ಕ್ರಮವಾಗಿ ಸೆಪ್ಟೆಂಬರ್ 27 ರಿಂದ ಅಕ್ಟೊಬರ್ 26 ರವರೆಗೆ ಕರ್ನಾಟಕ ರಾಜ್ಯ ಜಾನುವಾರು ರೋಗ ಕಾಯ್ದೆ 1961 ಮತ್ತು ಸಿಆರ್‌ಪಿಸಿ ಕಾಯ್ದೆ1973 ಕಲಂ 144 ರ ಮೇರೆಗೆ ಧಾರವಾಡ ಜಿಲ್ಲೆಯಾದ್ಯಂತ ಜಾನುವಾರು ಸಂತೆ, ಜಾನುವಾರು ಜಾತ್ರೆ ಮತ್ತು ಜಾನುವಾರು ಸಾಗಾಣಿಕೆ ಮಾಡುವುದನ್ನು ನಿಷೇಧಿಸಿ ಜಿಲ್ಲಾ ದಂಡಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಆದೇಶ ಹೊರಡಿಸಿದ್ದಾರೆ.
ಧಾರವಾಡ ಜಿಲ್ಲೆಯ ಕುಂದಗೋಳ ಮತ್ತು ನವಲಗುಂದ ತಾಲ್ಲೂಕುಗಳ 51 ಗ್ರಾಮಗಳಲ್ಲಿ 298 ಜಾನುವಾರುಗಳಲ್ಲಿ ಚರ್ಮ ಗಂಟು (Lumpy Skin Disease) ರೋಗವು ಕಂಡು ಬಂದಿರುತ್ತದೆ. ಪಶುವೈದ್ಯಕೀಯ ಎಲ್ಲ ಪಶುವೈದ್ಯರು ಮತ್ತು ತಾಂತ್ರಿಕ ಸಿಬ್ಬಂದಿ ಜಾನುವಾರುಗಳಿಗೆ ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ರೋಗವು ಜಾನುವಾರುಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವುದರಿಂದ, ರೋಗ ಹರಡುವಿಕೆಯನ್ನು ತಡೆಗಟ್ಟಲು ಈಗಾಗಲೇ ಜಿಲ್ಲೆಗೆ 50,000 ಡೋಸ್ ಲಸಿಕೆಯನ್ನು ಪಡೆದುಕೊಂಡು ಜಿಲ್ಲೆಯ ಪಶುವೈದ್ಯರು ಮತ್ತು ತಾಂತ್ರಿಕ ಸಿಬ್ಬಂದಿ ತಂಡದೊಂದಿಗೆ, ರೋಗ ಉಲ್ಬಣಗೊಂಡ ಗ್ರಾಮಗಳ ಸುತ್ತಮುತ್ತಲಿನ 5 ಕಿ.ಮೀ. ವ್ಯಾಪ್ತಿಯಲ್ಲಿಯ ಜಾನುವಾರುಗಳಿಗೆ ಲಸಿಕೆ ಹಾಕುವ ಕಾರ್ಯವು ಪ್ರಗತಿಯಲ್ಲಿದೆ. ರೋಗ ಹರಡುವುದನ್ನು ನಿಯಂತ್ರಿಸಲು ಜಿಲ್ಲಾಯಾದ್ಯಂತ ಜಾನುವಾರುಗಳ ಸಂತೆ, ಜಾನುವಾರುಗಳ ಜಾತ್ರೆ ಮತ್ತು ಜಾನುವಾರುಗಳ ಸಾಗಾಣಿಕೆಯನ್ನು ನಿಷೇಧಿಸಿ ಆದೇಶಿಸಲಾಗಿದೆ.
ಸಾಮೂಹಿಕ ಜಾನುವಾರುಗಳು ಸೇರುವಂತಹ ಜಾನುವಾರು ಜಾತ್ರೆ, ಜಾನುವಾರು ಸಂತೆ ಮತ್ತು ಜಾನುವಾರು ಸಾಗಾಣಿಕೆಗೆ ಮಾತ್ರ ಅನ್ವಯ ಆಗುತ್ತಿದ್ದು, ಇದನ್ನು ಹೊರತುಪಡಿಸಿ ಬೇರೆ ಯಾವ ಉದ್ದೇಶಕ್ಕೂ ಅನ್ವಯಿಸುವುದಿಲ್ಲ. ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 188 ರ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.
Kshetra Samachara
27/09/2022 06:18 pm