ಧಾರವಾಡ: ಧಾರವಾಡದಲ್ಲಿ ಕರ್ನಾಟಕ ಕಾಲೇಜು, ಕರ್ನಾಟಕ ವಿಶ್ವವಿದ್ಯಾಲಯ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಸೇರಿ ಹತ್ತಾರು ಪಾರಂಪರಿಕ ಕಟ್ಟಡಗಳಿವೆ. ಜಿಲ್ಲಾಧಿಕಾರಿ ಕಚೇರಿ ಕೂಡ ಈ ಸಾಲಿಗೆ ಸೇರುತ್ತದೆ. ಬ್ರಿಟೀಷರ ಕಾಲದಿಂದಲೂ ಇದು ಜಿಲ್ಲಾ ಆಡಳಿತದ ಹೆಡ್‌ಕ್ವಾರ್ಟರ್ ಆಗಿದೆ. ಅದರೊಂದಿಗೆ ಮತ್ತೊಂದು ನೂತನ ಜಿಲ್ಲಾಡಳಿತ ಭವನ ಸ್ಥಾಪನೆ ಸನ್ನಿಹಿತವಾಗಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಕರ್ನಾಟಕ ಕಾಲೇಜು, ಮಾಳಮಡ್ಡಿ, ಕೋರ್ಟ್, ಡಯಟ್‌ನಂತಹ ಪ್ರಮುಖ ಸ್ಥಳಗಳ ಮಧ್ಯೆ ಜಿಲ್ಲಾಧಿಕಾರಿ ಕಚೇರಿ ಇದೆ. ಸಾರ್ವಜನಿಕರ ಅನುಕೂಲಕ್ಕಾಗಿ ಬ್ರಿಟೀಷ್ ಕಾಲದಲ್ಲೇ ನಗರದ ಹೃದಯಭಾಗದಲ್ಲಿ ನಿರ್ಮಾಣಗೊಂಡು ಕಾರ್ಯನಿರ್ವಹಿಸುತ್ತಿದೆ. ಹಲವು ವರ್ಷಗಳಿಂದ ನೂತನ ಜಿಲ್ಲಾಡಳಿತ ಭವನ ನಿರ್ಮಾಣದ ಕೂಗು ಕೇಳಿಬರುತ್ತಲೇ ಇದೆ. ಇತ್ತೀಚೆಗೆ ಸುಮಾರು 100 ಕೋಟಿ ರೂಪಾಯಿ ವೆಚ್ಚದ ಜಿಲ್ಲಾಡಳಿತ ಭವನ ನಿರ್ಮಾಣಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.
ಇನ್ನುಳಿದ ಇಲಾಖೆಗಳ ಜಿಲ್ಲಾ ಮಟ್ಟದ ಕಚೇರಿಗಳು ನಗರದ ವಿವಿಧೆಡೆ ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಒಂದೇ ಸೂರಿನಡಿ ಹಲವು ಇಲಾಖೆಗಳು ಕಾರ್ಯನಿರ್ವಹಿಸಲು ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಬೇಡಿಕೆ ಇತ್ತು. ಹಿಂದಿನ ಇಬ್ಬರು ಜಿಲ್ಲಾಧಿಕಾರಿಗಳ ಆಡಳಿತಾವಧಿಯಲ್ಲೂ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿತ್ತು. ಆದರೆ, ಯೋಜನೆ ಕೈಗೂಡಿರಲಿಲ್ಲ.
ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆಗಳು ಸಾಮಾನ್ಯ. ಮಳೆ-ಬಿಸಿಲನ್ನು ಲೆಕ್ಕಿಸದ ಪ್ರತಿಭಟನಾಕಾರರಿಗೆ ಪ್ರತ್ಯೇಕ ಸ್ಥಳ ಮೀಡಲಿಡಲು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಯೋಜಿಸಿದ್ದಾರೆ. ಒಟ್ಟಾರೆ ನೂತನ ಜಿಲ್ಲಾಧಿಕಾರಿ ಭವನ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇದು ಕೈಗೂಡಿದ್ದೇ ಆದಲ್ಲಿ ಸಾರ್ವಜನಿಕರಿಗೆ ಒಂದೇ ಸೂರಿನಡಿ ಎಲ್ಲಾ ಸೌಲಭ್ಯಗಳು ಸಿಗಲಿವೆ.
Kshetra Samachara
29/08/2022 01:30 pm