ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ತನ್ನ ನೌಕರರ ವಿರುದ್ಧ ಹಲವು ವರ್ಷಗಳಿಂದ ಬಾಕಿ ಉಳಿದಿದ್ದ 5,966 ಪ್ರಕರಣಗಳನ್ನು ಇರ್ತ್ಯರ್ಥಪಡಿಸಿದೆ. ಆ ಮೂಲಕ ತಲೆ ತೂಗುತ್ತಿದ್ದ ಪ್ರಕರಣಗಳಿಂದ ತಮ್ಮ ಯಾವಾಗ ಮುಕ್ತಿ ಸಿಗುತ್ತದೊ ಎಂಬ ಚಿಂತೆಯಲ್ಲೇ ಕಾಲ ತಳ್ಳುತ್ತಿದ್ದ ನೌಕರರನ್ನು ನಿರಾಳಗೊಳಿಸಿದೆ.
ಹೌದು.ಸಂಸ್ಥೆಯ 9 ವಿಭಾಗಗಳು, 51 ಘಟಕಗಳು, ಪ್ರಾದೇಶಿಕ ತರಬೇತಿ ಕೇಂದ್ರ ಹಾಗೂ ಪ್ರಾದೇಶಿಕ ಕಾರ್ಯಾಗಾರದಲ್ಲಿ ತರಬೇತಿ/ಪರೀಕ್ಷಾರ್ಥಿ ಹಾಗೂ ಖಾಯಂ ಆಗಿ ಕೆಲಸ ಮಾಡುತ್ತಿರುವ ಚಾಲಕರು, ಚಾಲಕರು/ನಿರ್ವಾಹಕರು ಹಾಗೂ ತಾಂತ್ರಿಕ ಸಿಬ್ಬಂದಿ ವಿರುದ್ಧ ಒಟ್ಟು 6,858 ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿದಿದ್ದವು. ಈ ಪೈಕಿ ಕೆಲವು, ಇಲಾಖೆ ಮತ್ತು ಕೋರ್ಟ್ ವಿಚಾರಣೆ ಹಂತದಲ್ಲಿಯೂ ಇದ್ದವು.
ಅತ್ಯಂತ ಗಂಭೀರವಾದವುಗಳೇನೂ ಅಲ್ಲದ ಬಹುತೇಕ ಈ ಸಣ್ಣ ಪ್ರಕರಣಗಳನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್. ಭರತ್ ಅವರು, ತಾವು ಅಧಿಕಾರ ವಹಿಸಿಕೊಂಡ ಕೆಲ ದಿನಗಳಲ್ಲಿ ಇವುಗಳಿಗೆ ಮುಕ್ತಿ ನೀಡಿದ್ದಾರೆ. ಅದರಂತೆ, ನಿಗದಿತ ಕಾಲಮಿತಿಯಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸುವಂತೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ಹಾಗೂ ಕಾರ್ಯ ವ್ಯವಸ್ಥಾಪಕರಿಗೆ ಸೂಚನೆ ನೀಡಿ ಪ್ರಕರಣಗಳಿಗೆ ಅಂತ್ಯ ಹಾಡಿದ್ದಾರೆ.
ನೌಕರರು ಯಾವುದೇ ಕಿರಿಕಿರಿ ಇಲ್ಲದೆ ಕೆಲಸ ಮಾಡುವಂತಾಗಬೇಕು. ಎಲ್ಲಾ ತಪ್ಪುಗಳು ಉದ್ದೇಶಪೂರ್ವಕವಾಗಿ ಆಗಿರುವುದಿಲ್ಲ. ಆ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಬಾಕಿ ಉಳಿದಿದ್ದ ಪ್ರಕರಣಗಳನ್ನು ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಯಿತು. ಒಟ್ಟು ಪ್ರಕರಣಗಳ ಪೈಕಿ, 2,778 ಶಿಸ್ತು ಮತ್ತು 4,080 ಗೈರು ಹಾಜರಾತಿ ಪ್ರಕರಣಗಳನ್ನು ಬಗೆಹರಿಸಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್ ತಿಳಿಸಿದ್ದಾರೆ.
Kshetra Samachara
18/07/2022 03:38 pm