ಹುಬ್ಬಳ್ಳಿ: ಉತ್ತರ ಕರ್ನಾಟಕದ ಬಗ್ಗೆ ರಾಜ್ಯ ಸರ್ಕಾರ ಒಂದಿಲ್ಲೊಂದು ರೀತಿಯಲ್ಲಿ ತಾರತಮ್ಯ ಮಾಡುತ್ತಲೇ ಬರುತ್ತಿದೆ. ಸರ್ಕಾರದಿಂದ ನೂರಾರು ಕೋಟಿ ಬಾಕಿ ಉಳಿಸಿಕೊಂಡಿದ್ದು, ಅಭಿವೃದ್ಧಿ ಕಾರ್ಯಕ್ಕೆ ಅಡ್ಡಗಾಲು ಹಾಕುತ್ತಿದೆ. ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆಯ ಬಗ್ಗೆ ಸರ್ಕಾರಕ್ಕೆ ಯಾಕಿಷ್ಟು ನಿರ್ಲಕ್ಷ್ಯ ಎಂಬುವುದೇ ಅರ್ಥವಾಗುತ್ತಿಲ್ಲ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ರಾಜ್ಯ ಸರ್ಕಾರದಿಂದ ಸುಮಾರು 295 ಕೋಟಿ ಹಣ ಬಿಡುಗಡೆಯಾಗಬೇಕಿದೆ. ನೌಕರರ ಪಿಂಚಣಿ ಹಣ ಸೇರಿದಂತೆ ಹಲವಾರು ರೀತಿಯಲ್ಲಿ 295 ಕೋಟಿ ಹಣ ರಾಜ್ಯ ಸರ್ಕಾರದದಿಂದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಬರಬೇಕಿದೆ. ಅಲ್ಲದೇ ಸಾಕಷ್ಟು ಅಭಿವೃದ್ಧಿ ಕನಸನ್ನು ಹೊತ್ತಿರುವ ಮಹಾನಗರ ಪಾಲಿಕೆಗೆ ರಾಜ್ಯ ಸರ್ಕಾರದಿಂದ ಸರಿಯಾದ ಸಮಯಕ್ಕೆ ಹಣ ಸಂದಾಯವಾಗದೇ ಇರುವ ಹಿನ್ನೆಲೆಯಲ್ಲಿ ನಿವೃತ್ತ ನೌಕರರಿಗೆ ಹಾಗೂ ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿ ಉಂಟಾಗಿದ್ದು, ಈ ಬಗ್ಗೆ ಕೇಂದ್ರ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿಗಳು ಕೂಡ ಸಾಕಷ್ಟು ಧ್ವನಿ ಎತ್ತಿದ್ದಾರೆ. ಆದರೂ ಕೂಡ ರಾಜ್ಯ ಸರ್ಕಾರದಿಂದ ಬರಬೇಕಾದ ಹಣ ಮಾತ್ರ ಬಿಡುಗಡೆ ಆಗಿಲ್ಲ.
ಇನ್ನೂ ಅದೆಷ್ಟೋ ಯೋಜನೆಯ ಕನಸನ್ನು ಹೊತ್ತಿರುವ ನೂತನ ಚುನಾಯಿತ ಪ್ರತಿನಿಧಿಗಳಿಗೆ ಕೆಲಸ ಕಾರ್ಯಕ್ಕೆ ಅನುದಾನವೇ ಇಲ್ಲದಂತಾಗುವ ಸಾಧ್ಯತೆ ಹೆಚ್ಚಿದೆ. ಮೂಲಭೂತ ಸೌಕರ್ಯಗಳಿಗೂ ಕೂಡ ಆರ್ಥಿಕ ಸಂಕಷ್ಟ ಎದುರಾಗುವ ಸಾಧ್ಯತೆ ಹೆಚ್ಚಿದ್ದು, ಈಗಾಗಲೇ ಸಾಕಷ್ಟು ಬಾರಿ ಪತ್ರ ಬರೆದರೂ ಕೂಡ ಪ್ರಯೋಜನವಾಗಿಲ್ಲ. ಈ ಭಾಗದವರೇ ಸಿಎಂ ಆಗಿದ್ದರೂ ಕೂಡ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಸೂಕ್ತ ರಾಜ್ಯ ಸರ್ಕಾರದಿಂದ ಬರಬೇಕಾದ ಹಣ ಬರದೇ ಇರುವುದು ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗಿದೆ.
ಒಟ್ಟಿನಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ಸುಮಾರು ದಿನಗಳ ಬಳಿಕ ಚುನಾಯಿತ ಪ್ರತಿನಿಧಿಗಳು ಬಂದಿದ್ದಾರೆ. ಆದರೆ ಸಮರ್ಪಕವಾಗಿ ಹಣ ಸಂದಾಯ ಹಾಗೂ ಅನುದಾನ ಬಿಡುಗಡೆಯಾಗದೇ ಇರುವ ಹಿನ್ನೆಲೆಯಲ್ಲಿ ಪಾಲಿಕೆಗೆ ಆರ್ಥಿಕ ಸಂಕಷ್ಟ ಬಂದೊದಗಿದ್ದು, ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿಯವರು ಮುತುವರ್ಜಿಯಿಂದ ಸೂಕ್ತ ಕ್ರಮಗಳನ್ನು ಜರುಗಿಸಿ ಪಾಲಿಕೆಗೆ ಹಣವನ್ನು ಬಿಡುಗಡೆ ಮಾಡಬೇಕಿದೆ.
Kshetra Samachara
27/06/2022 11:07 pm