ಧಾರವಾಡ: ತಾಲೂಕು ಹಾಗೂ ಜಿಲ್ಲಾ ಹಂತದಲ್ಲಿ ಪರಿಹಾರವಾಗಬೇಕಾಗಿರುವ ಸರ್ಕಾರದ ಕಾರ್ಯ, ಸಾರ್ವಜನಿಕರ ಅಹವಾಲುಗಳ ಈಡೇರಿಕೆಗೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಕಾರ್ಯಕ್ರಮವನ್ನು ಸರ್ಕಾರ ಈಗಾಗಲೇ ಜಾರಿಗೆ ತಂದಿದ್ದು, ಅದರ ಭಾಗವಾಗಿ ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಧಾರವಾಡ ತಾಲೂಕಿನ ತಡಕೋಡ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಸಾರ್ವಜನಿಕರ ವಿವಿಧ ಸಮಸ್ಯೆಗಳನ್ನು ಆಲಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರ, ಪದವಿ ಪೂರ್ವ ಕಾಲೇಜು ಸ್ಥಾಪನೆ, ತಿಮ್ಮಾಪುರ ಮಡ್ಡಿಯಲ್ಲಿ ವಾಸವಾಗಿರುವ ಜನರ ಹೆಸರಿಗೆ ಮನೆಗಳ ಹಕ್ಕು ನೀಡುವುದು, ಟಾಟಾ ಮಾರ್ಕೊಪೊಲೊ ಸಂಸ್ಥೆಯ ಕಾರ್ಮಿಕರ ಪ್ರತಿಭಟನೆಗೆ ಜಿಲ್ಲಾಡಳಿತ, ಸರ್ಕಾರ ಸ್ಪಂದಿಸಿ, ಕಾರ್ಖಾನೆಯ ಆಡಳಿತ ಮಂಡಳಿಯೊಂದಿಗೆ ಮಧ್ಯಸ್ಥಿಕೆ ವಹಿಸಿ ಕಾರ್ಮಿಕರ ಬೇಡಿಕೆಗೆ ಸ್ಪಂದಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು, ಟಾಟಾ ಮಾರ್ಕೊಪೊಲೊ ಕಾರ್ಮಿಕರ ಹೋರಾಟದ ಬಗ್ಗೆ ಜಿಲ್ಲಾಡಳಿತ, ಸರ್ಕಾರ ಗಮನ ಹರಿಸಿದೆ. ಕಾರ್ಮಿಕ ಇಲಾಖೆಯ ಕಾನೂನು ಪ್ರಕಾರ ಮಧ್ಯಸ್ಥಿಕೆ ವಹಿಸಿ ಪರಿಹರಿಸಲು ಕಾರ್ಖಾನೆ ಹಾಗೂ ಕಾರ್ಮಿಕರನ್ನು ಚರ್ಚೆಗೆ ಆಹ್ವಾನಿಸಲಾಗಿದೆ . ತಡಕೋಡದ ತಿಮ್ಮಾಪುರ ಮಡ್ಡಿ ಪ್ರದೇಶದ 73 ನಿವೇಶನಗಳಲ್ಲಿ ವಾಸವಾಗಿ, ಈಗಾಗಲೇ ಮನೆ ನಿರ್ಮಿಸಿಕೊಂಡಿರುವವರ ಹೆಸರಿಗೆ ಹಕ್ಕು ಪತ್ರ ನೀಡಲಾಗುವುದು ಉಳಿದ ನಿವೇಶನಗಳನ್ನು ಅರ್ಹರಿಗೆ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಹಾಗೂ ಗ್ರಾಮದಲ್ಲಿ ಇರುವ ನಿವೇಶನ ರಹಿತರ ಪಟ್ಟಿ ಮಾಡಿ ನೀಡಿದರೆ, ಸೂರು ಒದಗಿಸಲು ಕ್ರಮ ವಹಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
Kshetra Samachara
16/04/2022 11:18 pm