ಕುಂದಗೋಳ : ಅರಣ್ಯ ಇಲಾಖೆಯ ಕಾಮಗಾರಿ,ಬೆಳೆ ವಿಮೆ ಸೇರಿದಂತೆ ಹಲವಾರು ವಿಷಯಗಳ ಕುರಿತಂತೆ ಪಟ್ಟಣದ ತಾಪಂ ಸಭಾ ಭವನದಲ್ಲಿ ಆಡಳಿತಾಧಿಕಾರಿ ಸಿದ್ದಣ್ಣ ಟಿ ನೇತೃತ್ವದಲ್ಲಿ ಸಭೆ ನಡೆದಿದ್ದು, ಕೇವಲ ೬ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಹಾಜರಾಗಿದ್ದರು.
ಈ ಸಂದರ್ಭ ಅರಣ್ಯ ಇಲಾಖೆ ಅಧಿಕಾರಿ ಆರ್.ಡಿ. ನದಾಫ್ ಮಾತನಾಡಿ ಇಲಾಖೆ ಪ್ರಗತಿ ಮಂಡಿಸುತ್ತಾ ರಸ್ತೆ ಬದಿಯಲ್ಲಿದ್ದ ಕಸ ಸುಡಲು ಬದುವಿಗೆ ಬೆಂಕಿ ಹಚ್ಚುತ್ತಿದ್ದಾರೆ. ಈ ವೇಳೆ ರಸ್ತೆ ಬದಿಯಲ್ಲಿನ ಸಸಿಗಳು ಸುಟ್ಟು ನಶಿಸುತ್ತಿವೆ. ಈ ಕುರಿತು ಗ್ರಾಪಂ ರೈತರಿಗೆ ತಿಳಿವಳಿಕೆ ಮೂಡಿಸಬೇಕು ಎಂದರು.
ಹಿರೇಗುಂಜಳ ಗ್ರಾಪಂ ಅಧ್ಯಕ್ಷ ದೇವಪ್ಪ ಅಣ್ಣಿಗೇರಿ ನಿರಂತರ ಜ್ಯೋತಿ ಅನುಷ್ಠಾನ ಸಮರ್ಪಕವಾಗುತ್ತಿಲ್ಲ ಎಂದು ಹೆಸ್ಕಾಂ ಅಧಿಕಾರಿ ವೀರೇಶ ಮಠದ ಅವರನ್ನು ಪ್ರಶ್ನಿಸಿದರು ಪ್ರಶ್ನೆಗೆ ಉತ್ತರಿಸಿದ ಅಧಿಕಾರಿ ವಿದ್ಯುತ್ ಬಿಲ್ ಪಾವತಿ ಮಾಡಿದರೆ ವಿದ್ಯುತ್ ಪೂರೈಸಲಾಗುವುದು ಎಂದರು, ಈ ಮಾತಿಗೆ ಆಡಳಿತಾಧಿಕಾರಿ ಸಿದ್ದಣ್ಣ ಮೊದಲು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿ ಎಂದರು.
ಮೆಣಸಿನಕಾಯಿ ಬೆಳೆ ವಿಮೆ ಮಂಜೂರಾಗಿದ್ದು , ರೈತರಿಗೆ ತಲುಪಿದೆಯಾ ? ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಆಡಳಿತಾಧಿಕಾರಿ ಪ್ರಶ್ನಿಸಿದಾಗ ಉತ್ತರಿಸಿದ ಅಧಿಕಾರಿ' ಈ ಕುರಿತು ನನಗೆ ಮಾಹಿತಿ ಇಲ್ಲ ಎಂದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಅಧಿಕಾರಿ ಆಕಾಶ ಮಾತನಾಡಿ , ಜಲಜೀವನ ಯೋಜನೆಯಡಿ ಕಾಮಗಾರಿಗಳು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು .
ಸಭೆಯಲ್ಲಿ 26 ಗ್ರಾಪಂ ಅಧ್ಯಕ್ಷರ ಪೈಕಿ ಕೇವಲ ಆರು ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಮಾತ್ರ ಹಾಜರಿದ್ದರು, ತಾಪಂ ಅಧಿಕಾರಿ ಡಾ.ಮಹೇಶ ಕುರಿಯವರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
10/03/2022 03:03 pm