ಹುಬ್ಬಳ್ಳಿ: ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸಿದ ದಂಡ ಪಾವತಿಸದೇ ಓಡಾಡುವ ವಾಹನ ಸವಾರರನ್ನು ಪತ್ತೆ ಮಾಡಿ ಬಾಕಿ ವಸೂಲಿಗೆ ಹು-ಧಾ ಪೊಲೀಸ್ ಕಮೀಷನರೇಟ್ ಹೊಸ ಅಸ್ತ್ರವೊಂದನ್ನು ಪ್ರಯೋಗಿಸುತ್ತಿದೆ. ಪಾರ್ಕಿಂಗ್ ಸ್ಥಳಕ್ಕೆ ತೆರಳಿ ವಾಹನಗಳ ನಂಬರ್ ಪರಿಶೀಲಿಸಿ, ಹಳೇ ದಂಡ ಬಾಕಿ ವಸೂಲಿ ಮಾಡುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
ವಾಣಿಜ್ಯನಗರಿ ಹುಬ್ಬಳ್ಳಿ ಹಾಗೂ ವಿದ್ಯಾಕಾಶಿ ಧಾರವಾಡದಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅಲ್ಲದೆ ದಂಡ ಪಾವತಿಸದೇ ಓಡಾಡುತ್ತಿರುವವರಿಗೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ. ಮಾರುಕಟ್ಟೆ, ಬಸ್ ನಿಲ್ದಾಣ, ರೈಲು ನಿಲ್ದಾಣ, ಶಾಪಿಂಗ್ ಮಾಲ್, ಮತ್ತಿತರ ಜನನಿಬಿಡ ಪ್ರದೇಶಗಳಲ್ಲಿ ಸಂಚಾರ ಪೊಲೀಸರು ಮಷಿನ್ ಹಿಡಿದು ಓಡಾಡುತ್ತಾರೆ. ಪಾರ್ಕಿಂಗ್ ಲಾಟ್ ನಲ್ಲಿ ನಿಲ್ಲಿಸಿರುವ ವಾಹನಗಳ ನೋಂದಣಿ ಸಂಖ್ಯೆಯನ್ನು ಟಿಎಂಸಿಗೆ ನಿಯಂತ್ರಣ ಕೊಠಡಿ) ಕಳುಹಿಸಿ ಸ್ಥಳದಲ್ಲೇ ವಾಹನದ ಜನ್ಮ ಜಾಲಾಡುತ್ತಾರೆ. ಹಳೇ ದಂಡ ಬಾಕಿ ಇದ್ದಲ್ಲಿ ಸ್ಥಳದಲ್ಲೇ ಬಾಕಿ ವಸೂಲಿ ಮಾಡಿ ಬ್ಲಾಕ್‌ಬೆರಿ ಮೂಲಕ ರಸೀದಿ ಕೊಡುತ್ತಾರೆ.
ಇನ್ನೂ ಜನತಾ ಬಜಾರ್, ಕೊಪ್ಪಿಕರ ರಸ್ತೆ, ದುರ್ಗದ ಬೈಲ್, ಘಂಟಿಕೇರಿ ಓಣಿ, ಕೊಯಿನ್ ರಸ್ತೆ, ಸ್ಟೇಶನ್ ರಸ್ತೆ, ಗೋಕುಲ ರಸ್ತೆ, ಕೇಶ್ವಾಪುರ, ಚನ್ನಮ್ಮ ವೃತ್ತ ಮತ್ತಿತರ ಕಡೆಗಳಲ್ಲಿ ಪೂರ್ವ, ಉತ್ತರ, ದಕ್ಷಿಣ ಹಾಗೂ ಧಾರವಾಡ ಸಂಚಾರ ಪೊಲೀಸರು ಕಾರ್ಯಾಚರಣೆ ನಡೆಸುತ್ತಾರೆ, ಹಾಗಾಗಿ, ವಾಹನ ಸವಾರರು ಪಾರ್ಕಿಂಗ್ ಮಾಡುವ ಮುನ್ನ ಈ ಬಗ್ಗೆ ಯೋಚಿಸಬೇಕಿದೆ. ಕೆಲ ವಾಹನ ಸವಾರರು 2014 ಮತ್ತು 15ರಲ್ಲಿ ನೀಡಿದ ದಂಡ ಪಾವತಿಸದ ಈಗಲೂ ರಾಜಾರೋಷವಾಗಿ ಓಡಾಡುತ್ತಿರುವುದು ಪತ್ತೆಯಾಗಿದೆ. ವಾಹನ ಮಾರಾಟ, ಮರು ನೋಂದಣಿ ಮತ್ತಿತರ ಸಂದರ್ಭದಲ್ಲಿ ಮಾತ್ರ ಅನಿವಾರ್ಯವಾಗಿ ದಂಡ ಪಾವತಿಸಲೇಬೇಕಾಗುತ್ತದೆ. ದಂಡ ಬಾಕಿ ಇರುವ ವಾಹನಗಳು ಸಿಕ್ಕರೂ ಹಳೆಯ ದಂಡವನ್ನೇ ಪೊಲೀಸರು ವಸೂಲಿ ಮಾಡುತ್ತಿದ್ದಾರೆ. ಆದರೆ, ಯಾವುದೇ ಹೆಚ್ಚುವರಿ ದಂಡ ವಿಧಿಸುತ್ತಿಲ್ಲ ಎಂಬುದು ಸಮಾಧಾನಕರ ಅಂಶ.
ಸಿಸಿ ಟಿವಿ ಕ್ಯಾಮರಾ ಫೂಟೇಜ್ ಹಾಗೂ ಮೊಬೈಲ್ ಫೋನ್ ಫೋಟೋ ಪರಿಶೀಲಿಸುವ ಮೂಲಕ ದಂಡ ವಿಧಿಸುವ ಪ್ರಕ್ರಿಯೆ ಹಲವು ವರ್ಷಗಳಿಂದ ಚಾಲ್ತಿಯಲ್ಲಿದೆ. ಹೀಗೆ ದಂಡದ ರಸೀದಿ ಪಡೆದರೂ ದಂಡ ಕಟ್ಟದ ಹಲವರು ಓಡಾಡುತ್ತಿದ್ದಾರೆ. ಇಂಥವರ ಪತ್ತೆಗಾಗಿ ಪಾರ್ಕಿಂಗ್ ಸ್ಥಳದಲ್ಲಿ ಹುಡುಕಾಟ ನಡೆಸಿ ದಂಡ ವಸೂಲಿ ಕಾರ್ಯ ಮಾಡಲಾಗುತ್ತಿದೆ. ಇಷ್ಟು ದಿನ ರಸ್ತೆಯಲ್ಲಿ ನಿಂತು ಸಂಚಾರ ಉಲ್ಲಂಘನೆ ಮಾಡಿ ಓಡಾಡುತ್ತಿದ್ದವರಿಗೆ ದಂಡ ವಿಧಿಸುತ್ತಿದ್ದ ಸಂಚಾರ ಪೊಲೀಸರು, ಹಳೇ ದಂಡ ವಸೂಲಿ ಮಾಡಲು ಇನ್ನಿಲ್ಲದ ಹೊಸ ತಂತ್ರಗಳನ್ನು ಪ್ರಯೋಗಿಸುತ್ತಿದ್ದಾರೆ. ಈ ಮೂಲಕ ಸರ್ಕಾರದ ಬೊಕ್ಕಸವನ್ನು ಭರ್ತಿ ಮಾಡಲು ಮುಂದಾಗಿದ್ದಾರೆ.
Kshetra Samachara
02/08/2021 08:19 pm