ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಬೀದಿನಾಯಿಗಳ ನಿಯಂತ್ರಣ ಹಾಕುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಾದಿ ಬೀದಿಗಳಲ್ಲಿ ಗುಂಪು ಗುಂಪಾಗಿ ಬಂದು ಸಿಕ್ಕ ಸಿಕ್ಕ ಸಾರ್ವಜನಿಕರು, ಶಾಲಾ, ಕಾಲೇಜು ವಿದ್ಯಾರ್ಥಿಗಳು, ಮಕ್ಕಳು, ವೃದ್ದರ ಮೇಲೆ ದಾಳಿ ಮಾಡಿ ಗಾಯಗೊಳಿಸುತ್ತಿದ್ದ ಬೀದಿ ನಾಯಿಗಳ ಹಾವಳಿಗೆ ಮಹಾನಗರ ಪಾಲಿಕೆ ಮದ್ದು ರೆಡಿ ಮಾಡಿದೆ.
ಹೌದು. ಮಹನಾಗರ ಪಾಲಿಕೆ ವ್ಯಾಪ್ತಿಯಲ್ಲಿ ನಾಯಿಗಳ ಸಂತತಿಗೆ ಬ್ರೇಕ್ ಹಾಕಲು ಸಂತಾನಹರಣ ಶಕ್ತಿ ಚಿಕಿತ್ಸೆ ಮಾಡಲಾಗುತ್ತಿದೆ. ನಗರದಲ್ಲಿ ಬೀದಿ ನಾಯಿಗಳ ಹಾವಳಿ ಜಾಸ್ತಿಯಾಗಿದ್ದರಿಂದ ನಾಯಿಗಳ ಸಂಖ್ಯೆಯನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಿಸಲಾಗುತ್ತದೆ. ಇದರಿಂದಾಗಿ ಬೀದಿನಾಯಿಗಳ ಸಂತತಿ ಕಡಿಮೆಯಾಗಲಿದೆ.
ಬೀದಿನಾಯಿಗಳ ಹಾವಳಿಗೆ ರೋಸಿ ಹೋಗಿದ್ದ ಸಾರ್ವಜನಿಕರು ಅವುಗಳನ್ನು ಹಿಡಿದು ಸ್ಥಳಾಂತರಿಸುವಂತೆ ಮಹಾನಗರ ಪಾಲಿಕೆ ಕಂಟ್ರೋಲ್ ರೂಂಗೆ ನಿತ್ಯ ನೂರಾರು ಕರೆಗಳು ಬರುತ್ತವೆ. ಹೀಗೆ ಬಂದ ಕರೆಗಳನ್ನು ಮಾಹಿತಿಯನ್ನು ಪಾಲಿಕೆ ಸಿಬ್ಬಂದಿ ಸಂಗ್ರಹಿಸಿ ನಾಯಿಗಳ ಕಾರ್ಯಾಚರಣೆ ನಡೆಸುವ ತಂಡಕ್ಕೆ ನೀಡಲಾಗುತ್ತಿದೆ. ಈ ತಂಡ ಪ್ರತಿದಿನ ಆದ್ಯತೆ ಆಧಾರದ ಮೇಲೆ 20-30 ನಾಯಿಗಳು ಹಿಡಿದು ನಗರದ ಹೊರವಲಯದ ಇಟ್ಟಿಗಟ್ಟಿ ಅಪರೇಷನ್ ಥೇಟರ್ ಗೆ ಸಾಗಿಸುವ ಕೆಲಸ ಮಾಡುತ್ತದೆ.
ನಾಯಿಗಳಿಗೆ ಸಂತಾನಹರಣ ಶಕ್ತಿ ಶಸ್ತ್ರಚಿಕಿತ್ಸೆ ಮಾಡುವ ದೃಷ್ಟಿಯಿಂದ ನಗರದ ಹೊರವಲಯದ ಇಟ್ಟಿಗಟ್ಟಿಯಲ್ಲಿ ನಾಯಿಗಳಿಗಾಗಿ ಅಪರೇಷನ್ ಥೇಟರ್ ಹಾಗೂ ಗಾರ್ಡನ್ ನಿರ್ಮಾಣ ಮಾಡಲಾಗಿದ್ದು, ನಾಯಿಗಳ ಸಂತಾನಹರಣ ಮಾಡಿ ಮತ್ತೆ ನಗರದಲ್ಲಿ ತಂದು ಬಿಡಲಾಗುತ್ತದೆ.
ಬೀದಿ ನಾಯಿಗಳ ಹಾವಳಿ ತಡೆ ಮಹಾನಗರ ಪಾಲಿಕೆ ಒಂದು ನಾಯಿಗೆ 980 ರು. ಖರ್ಚು ಮಾಡುತ್ತಿದೆ. ಚಿಕಿತ್ಸೆ ನೀಡುವುದರ ಜೊತೆಗೆ ಅದನ್ನು ಮೂರು ದಿನಗಳ ಕಾಲ ಶಸ್ತ್ರ ಚಿಕಿತ್ಸೆ ಬಳಿಕ ಆರೈಕೆ ಮಾಡುವ ಕೆಲಸವನ್ನು ಮಾಡಬೇಕಾಗುತ್ತದೆ. ಇದಕ್ಕಾಗಿ ಬೆಂಗಳೂರು ಮೂಲದ ಎನ್ ಜಿ ಓ ಕ್ಕೆ ಟೆಂಡರ್ ನೀಡಲಾಗಿದೆ. ಟೆಂಡರ್ ಪಡೆದ ಎನ್ ಜಿಓ ಬೀದಿ ನಾಯಿಗಳಿಗೆ ಆ್ಯಂಟಿ ರೇಬಿಸ್ ಚುಚ್ಚು ಮದ್ದು ಸಹ ನೀಡುವದಲ್ಲದೆ, ಸಂತಾನಗರಣ ಚಿಕಿತ್ಸೆಯಾದ ನಾಯಿಗಳ ಗುರುತು ಪತ್ತೆಗಾಗಿ ನಾಯಿ ಬಲಗಿಯನ್ನು ಅರ್ಧಚಂದ್ರಾಕೃತಿಯಲ್ಲಿ ಕತ್ತರಿಸಿ ಬಿಡಲಾಗುತ್ತದೆ. ಇವೆಲ್ಲವೂ ಮಹಾನಗರ ಪಾಲಿಕೆ ಪಶು ವೈದ್ಯಾಧಿಕಾರಿಗಳ ಸಲಹೆಯಂತೆ ಕಾರ್ಯನಿರ್ವಹಿಸುತ್ತಾರೆ.
ವಾಣಿಜ್ಯ ನಗರಿಯಲ್ಲಿ ಬರೋಬ್ಬರಿ 18 ಸಾವಿರಕ್ಕೂ ಅಧಿಕ ಬೀದಿ ನಾಯಿಗಳು ಇವೆ. ಪ್ರತಿ ವಾರ್ಡ್‌ನಲ್ಲೂ ಬೀದಿ ನಾಯಿಗಳ ಹಾವಳಿ ಇದ್ದೇ ಇದೆ. ಹೆಚ್ಚಾಗಿ ಮುಖ್ಯ ರಸ್ತೆಗಳಲ್ಲಿಯೇ ನಾಯಿಗಳ ಹಾವಳಿ ಅಧಿಕವಾಗಿದೆ. ಇದರಿಂದ ವಾಹನ ಸವಾರರು, ಸಾರ್ವಜನಿಕರು, ಪಾದಚಾರಿಗಳು ಪರದಾಡುವುದು ಮಾಮೂಲಿಯಾಗಿದೆ.
ಹೀಗಾಗಿ ನಿತ್ಯ ನೂರಾರು ಕರೆಗಳು ಮಹಾನಗರ ಪಾಲಿಕೆ ಕಂಟ್ರೋಲ್ ರೂಂಗೆ ಬರುತ್ತವೆ. ಕಳೆದ ಡಿಸೆಂಬರ್ ತಿಂಗಳಲ್ಲಿ 278 ದೂರುಗಳು ಬಂದ್ರೆ, ಜನವರಿಯಲ್ಲಿ 211 ದೂರುಗಳು ಬಂದಿದ್ದು, ದೂರು ಬಂದ ಪ್ರದೇಶದ ನಾಯಿಗಳನ್ನು ಹಂತ ಹಂತವಾಗಿ ಹಿಡಿದು ಸಂತಾನಹರಣ ಚಿಕಿತ್ಸೆ ಮೂಲಕ ಬೀದಿನಾಯಿಗಳ ನಿಯಂತ್ರಣಕ್ಕೆ ಮಹಾನಗರ ಪಾಲಿಕೆ ನಿತ್ಯ ಶ್ರಮ ಹಾಕುತ್ತಿದೆ.
ಹೀಗಾಗಿ ನಾಯಿ ಸಂಖ್ಯೆ ಹೆಚ್ಚದಂತೆ ತಡೆಯಲು ಈಗಾಗಲೇ ಕ್ರಮ ತೆಗೆದುಕೊಳ್ಳಲಾಗಿದೆ. ನಾಯಿ ಕೊಲ್ಲುವ ಅಧಿಕಾರವಿಲ್ಲ.ಹೀಗಾಗಿ ನ್ಯಾಯಾಲಯದ ಆದೇಶದಂತೆ ಬೀದಿ ನಾಯಿಗಳ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಲಾಗುತ್ತಿದೆ ಎಂದು ಮಹಾನಗರ ಪಾಲಿಕೆ ಮುಖ್ಯ ಪಶುವೈದ್ಯಾಧಿಕಾರಿಗಳು ಅಭಿಪ್ರಾಯ ಹಂಚಿಕೊಂಡಿದ್ದಾರೆ.
Kshetra Samachara
08/02/2021 09:41 pm