ಧಾರವಾಡ ಜಿಲ್ಲೆಯಲ್ಲಿ ಡಿಎಪಿ ಗೊಬ್ಬರಕ್ಕಾಗಿ ರೈತರು ಪರಿತಪಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಡಿಎಪಿ ರಸಗೊಬ್ಬರ ದಾಸ್ತಾನು ಇದ್ದರೂ ಸೊಸೈಟಿ ಹಾಗೂ ಪರವಾನಗಿ ಪಡೆದ ಡೀಲರ್‌ಗಳು ಕಂಪನಿಗೆ ಹಣ ಪಾವತಿ ಮಾಡಿ ಗೊಬ್ಬರ ಖರೀದಿ ಮಾಡದೇ ಇರುವುದರಿಂದ ರಸಗೊಬ್ಬರಕ್ಕಾಗಿ ರೈತರು ಅಲೆದಾಡುವಂತಾಗಿದೆ.
ಧಾರವಾಡದ ಹಳೇ ಎಪಿಎಂಸಿಯಲ್ಲಿರುವ ಸೊಸೈಟಿಯಲ್ಲಿ ಗೊಬ್ಬರ ಖರೀದಿ ಮಾಡಲು ರೈತರು ಅಲೆದಾಡುತ್ತಿದ್ದಾರೆ. ಆದರೆ ಸೊಸೈಟಿಯವರು ಹಣ ಪಾವತಿ ಮಾಡಿ ಕಂಪನಿಯವರಿಂದ ಗೊಬ್ಬರ ಖರೀದಿ ಮಾಡಿರಲಿಲ್ಲ. ಹೀಗಾಗಿ ಸಮಸ್ಯೆ ಆಗಿದ್ದು, ಜಿಲ್ಲೆಗೆ ಬೇಕಾದಷ್ಟು ಗೊಬ್ಬರ ದಾಸ್ತಾನು ಇದೆ. ಪರವಾನಗಿ ಹೊಂದಿರುವ ಡೀಲರ್‌ಗಳು ಕಂಪನಿಯವರಿಂದ ಗೊಬ್ಬರ ಖರೀದಿ ಮಾಡಿ ಪೂರೈಕೆ ಮಾಡಬೇಕಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.
ಗೊಬ್ಬರದ ಸಮಸ್ಯೆ ಆಗಿದ್ದರಿಂದ ಹಳೇ ಎಪಿಎಂಸಿಯಲ್ಲಿ ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಅವರು ಕೃಷಿ ಇಲಾಖೆ ಹಾಗೂ ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ನಡೆಸಿದರು. ಬೆಳಿಗ್ಗೆಯಿಂದ ರೈತರು ಗೊಬ್ಬರಕ್ಕಾಗಿ ಅಲೆದಾಡುತ್ತಿದ್ದು, ಇದುವರೆಗೂ ರೈತರಿಗೆ ಬೇಕಾದ ಗೊಬ್ಬರ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಬಂದ ಕೃಷಿ ಇಲಾಖೆ ಜಂಟಿ ನಿರ್ದೇಶಕರು ಇರುವ ತಾಂತ್ರಿಕ ಸಮಸ್ಯೆ ವಿವರಿಸಿ, ಸದ್ಯಕ್ಕೆ ನಾಲ್ಕು ಲೋಡ್ ಡಿಎಪಿ ಗೊಬ್ಬರ ತರಿಸಿ ರೈತರಿಗೆ ವಿತರಣೆ ಮಾಡಿದರು.
ಧಾರವಾಡ ತಾಲೂಕಿನ ವಿವಿಧ ಊರುಗಳಿಂದ ಬಂದ ರೈತರು ಡಿಎಪಿ ಗೊಬ್ಬರ ಬರುತ್ತಿದ್ದಂತೆಯೇ ಅದನ್ನು ಖರೀದಿ ಮಾಡಲು ಮುಗಿಬಿದ್ದಿದ್ದರು. ಯಾವ ರೈತರಿಗೂ ಅನ್ಯಾಯವಾಗದಂತೆ ಸಮರ್ಪಕವಾಗಿ ಗೊಬ್ಬರ ವಿತರಣೆ ಮಾಡುವಂತೆ ಬಸವರಾಜ ಕೊರವರ ಒತ್ತಾಯಿಸಿದರು.
Kshetra Samachara
01/06/2022 05:19 pm