ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ
ಧಾರವಾಡ: ಮೇ ತಿಂಗಳು ಮುಗಿದು ಜೂನ್ ತಿಂಗಳು ಆರಂಭವಾಗುತ್ತಿದೆ. ಹೊಲಗಳನ್ನು ಹಸನುಗೊಳಿಸುತ್ತಿರುವ ರೈತ ಸಮೂಹ ಮುಂಗಾರು ಬಿತ್ತನೆಗೆ ತಯಾರಾಗುತ್ತಿದ್ದಾರೆ. ಈಗಾಗಲೇ ಮುಂಗಾರು ಬಿತ್ತನೆಗೆ ಅವಶ್ಯವಾದ ರಸಗೊಬ್ಬರವನ್ನು ಕೃಷಿ ಇಲಾಖೆ ದಾಸ್ತಾನು ಮಾಡಿದೆ. ಆದರೆ, ಅದರಲ್ಲಿ ಪ್ರಮುಖವಾದ ಡಿಎಪಿ ಗೊಬ್ಬರವೇ ಸ್ಟಾಕ್ ಇಲ್ಲವಾಗಿದೆ. ಇನ್ನು ಸೋಯಾಬಿನ್ ಬೀಜ ಮಾತ್ರ ಕೃಷಿ ಇಲಾಖೆಯ ರೈತಸಂಪರ್ಕ ಕೇಂದ್ರಕ್ಕೆ ಬಂದಿದ್ದು, ಮುಂಗಾರು ಬಿತ್ತನೆಗೆ ಅವಶ್ಯವಾಗಿರುವ ತೊಗರಿ, ಉದ್ದು, ಹೆಸರು, ಭತ್ತ, ಅಲಸಂದಿ ಬೀಜಗಳೇ ಇನ್ನೂ ದಾಸ್ತಾನು ಆಗದೇ ಇರುವುದರಿಂದ ಪ್ರತಿನಿತ್ಯ ರೈತರು ರೈತ ಸಂಪರ್ಕ ಕೇಂದ್ರಕ್ಕೆ ಅಲೆದಾಡುವಂತಾಗಿದೆ. ರಸಗೊಬ್ಬರದ ಬಗ್ಗೆ ಕೃಷಿ ಇಲಾಖೆ ಜಂಡಿ ನಿರ್ದೇಶಕರನ್ನು ಕೇಳಿದರೆ ಡಿಎಪಿ ಸೇರಿದಂತೆ ಇತರೆ ರಸಗೊಬ್ಬರ ಸ್ಟಾಕ್ ಇದೆ ಎಂಬ ಉತ್ತರ ನೀಡುತ್ತಾರೆ.
ಕೃಷಿ ಇಲಾಖೆಯಿಂದ ಸೊಸೈಟಿ ಹಾಗೂ ಡೀಲರ್ಗಳಿಗೆ ಗೊಬ್ಬರ ಪೂರೈಕೆ ಮಾಡಲಾಗುತ್ತದೆ. ಆದರೆ, ಧಾರವಾಡದ ಹಳೆ ಎಪಿಎಂಸಿಯಲ್ಲಿರುವ ಸೊಸೈಟಿಯಲ್ಲಿ ಡಿಎಪಿ ಗೊಬ್ಬರವೇ ಸ್ಟಾಕ್ ಇಲ್ಲದ್ದರಿಂದ ರೈತರು ಸೊಸೈಟಿ ಮುಂದೆ ಗೊಬ್ಬರಕ್ಕಾಗಿ ಕಾಯುವ ಪರಿಸ್ಥಿತಿ ಎದುರಾಗಿದೆ. ಇನ್ನೂ ಕೆಲ ರೈತರು ಕಾದು ಕಾದು ಸುಸ್ತಾಗಿ ಸೊಸೈಟಿ ಕಟ್ಟೆಯ ಮೇಲೆಯೇ ಮಲಗಿಕೊಂಡ ದೃಶ್ಯಗಳು ಕಂಡು ಬಂದವು. ಈಗಾಗಲೇ ಗೊಬ್ಬರ ವಿತರಣೆ ನಡೆದಿದ್ದು, ಅದರಲ್ಲಿ ರೈತರಿಗೆ ಅವಶ್ಯವಾದ ಗೊಬ್ಬರವೇ ಸಿಗದಿದ್ದರಿಂದ ರೈತರು ಕಂಗಾಲಾಗಿದ್ದಾರೆ. ಆದರೆ, ಡಿಎಪಿ ಗೊಬ್ಬರವೂ ಸ್ಟಾಕ್ ಇದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ಮಾಹಿತಿ ನೀಡುತ್ತಾರೆ.
ಕೇಳಿದ್ರಲ್ಲ ಗೊಬ್ಬರ ಸ್ಟಾಕ್ ಇದೆ ಎಂದು ಅಧಿಕಾರಿಗಳು ಹೇಳುತ್ತಿದ್ದರೆ, ಇತ್ತ ಗೊಬ್ಬರವೇ ಸಿಗದೇ ರೈತರು ಕಂಗಾಲಾಗಿದ್ದಾರೆ. ಹೆಚ್ಚು ಬೇಡಿಕೆ ಇರುವ ಡಿಎಪಿ ಗೊಬ್ಬರ ಬೇಕಾದಷ್ಟು ದಾಸ್ತಾನು ಇಲ್ಲ. ಇನ್ನೆರಡು ದಿನದಲ್ಲಿ ಗೊಬ್ಬರ ಬರಬಹುದು ಎನ್ನಲಾಗುತ್ತಿದೆ. ಬಿತ್ತನೆ ಪೂರ್ವ ವಾಡಿಕೆಗಿಂತ ಪ್ರಸಕ್ತ ವರ್ಷ ಹೆಚ್ಚಿನ ಮಳೆಯಾಗಿದ್ದು, ಇನ್ನು ಮುಂದೆ ಕೃಷಿ ಚಟುವಟಿಕೆಗಳು ಗರಿಗೆದರಲಿವೆ. ಈಗಾಗಲೇ ಅದಕ್ಕೆ ಬೇಕಾದ ಬೀಜ, ಗೊಬ್ಬರ ಪಡೆದುಕೊಳ್ಳಲು ರೈತರು ರೈತ ಸಂಪರ್ಕ ಕೇಂದ್ರಕ್ಕೆ ಅಲೆದಾಡುತ್ತಿದ್ದು, ಅವರಿಗೆ ಬೇಕಾದ ಬೀಜ, ಗೊಬ್ಬರ ಇನ್ನಷ್ಟೇ ಬರಬೇಕಿದೆ. ಸರ್ಕಾರ ಈ ಸಮಸ್ಯೆಗೆ ತುರ್ತು ಸ್ಪಂದಿಸಬೇಕಾದ ಅನಿವಾರ್ಯತೆ ಇದೆ.
Kshetra Samachara
23/05/2022 07:53 pm