ಧಾರವಾಡ: ಧಾರವಾಡದ ಹೊಸ ಎಪಿಎಂಸಿಯಲ್ಲಿ ತೆರೆಯಲಾಗಿರುವ ಕಡಲೆ ಖರೀದಿ ಕೇಂದ್ರಗಳಲ್ಲಿ ಅವ್ಯವಹಾರ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಕಡಲೆ ತೆಗೆದುಕೊಂಡು ಬರುವ ರೈತರಿಗೆ ಮೋಸ ಮಾಡಲಾಗುತ್ತಿದೆ. 50 ಕೆಜಿ ಪ್ಯಾಕೇಟ್‌ನ್ನು ಸರಿಯಾಗಿ ತೂಕ ಮಾಡುತ್ತಿಲ್ಲ. ಪ್ಯಾಕೇಟ್‌ನ್ನು ಕೇಂದ್ರದಲ್ಲಿ ಕೆಲವರು ಬಚ್ಚಿಡುತ್ತಿದ್ದಾರೆ. ಅಲ್ಲದೇ ಬೇರೆ ಖರೀದಿ ಕೇಂದ್ರಗಳಲ್ಲಿ ಪರವಾನಿಗಿ ತೆಗೆಸಿದ ರೈತರಿಂದ ಹಣ ಪಡೆದುಕೊಳ್ಳುತ್ತಿಲ್ಲ. ಆದರೆ, ಧಾರವಾಡ ಎಪಿಎಂಸಿಯಲ್ಲಿರುವ ಕಡಲೆ ಖರೀದಿ ಕೇಂದ್ರದಲ್ಲಿ ಪ್ರತಿಯೊಬ್ಬ ರೈತನಿಂದ 100 ರೂಪಾಯಿ ಪಡೆಯಲಾಗುತ್ತಿದೆ ಎಂಬ ಆರೋಪವೂ ಕೇಳಿ ಬಂದಿದೆ.
ಹೆಬ್ಬಳ್ಳಿ ಗ್ರಾಮದ ರೈತ ಮಂಜುನಾಥ ದೇಸಾಯಿ ಅವರು ನಿನ್ನೆಯೂ ಕಡಲೆಯನ್ನು ತೆಗೆದುಕೊಂಡು ಖರೀದಿ ಕೇಂದ್ರಕ್ಕೆ ಬಂದಿದ್ದರು. ಆಗಲೂ ಗೋಲ್‌ಮಾಲ್ ಮಾಡಲಾಗಿದೆ. ಇಂದು ಬೇಕಂತಲೇ ಮತ್ತೆ ಒಂದಿಷ್ಟು ಕಡಲೆ ತೆಗೆದುಕೊಂಡು ಖರೀದಿ ಕೇಂದ್ರಕ್ಕೆ ಬಂದಿದ್ದರು. ಆಗ ಕೇಂದ್ರದಲ್ಲಿದ್ದ ಒಬ್ಬ ವ್ಯಕ್ತಿ ಒಂದು ಪ್ಯಾಕೇಟ್‌ನ್ನು ಬಚ್ಚಿಟ್ಟುಕೊಂಡಿದ್ದ. ಇದನ್ನು ರೈತ ಮಂಜುನಾಥ ಅವರು ರೆಡ್ ಹ್ಯಾಂಡ್ ಆಗಿ ಹಿಡಿದು ಎಪಿಎಂಸಿ ಅಧ್ಯಕ್ಷರು ಬಂದು ಇದನ್ನು ಪರಿಶೀಲನೆ ಮಾಡುವವರೆಗೂ ಕಡಲೆ ತೂಕ ಮಾಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ನಂತರ ಎಪಿಎಂಸಿ ಅಧ್ಯಕ್ಷ ಎಂ.ಸಿ.ಹುಲ್ಲೂರ ಸ್ಥಳಕ್ಕೆ ಬಂದು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ನಾಳೆಯಿಂದ ಗೋದಾಮಿನ ಒಳಗೆ ಕಡಲೆ ತೂಕ ಮಾಡುವುದನ್ನು ಬಿಟ್ಟು ಪ್ರಾಂಗಣದಲ್ಲೇ ಕಡಲೆ ತೂಕ ಮಾಡಬೇಕು. ಅಲ್ಲದೇ ಕಡಲೆ ತೆಗೆದುಕೊಂಡು ಬರುವ ರೈತರು, ಒಬ್ಬೊಬ್ಬರೇ ಬರಬಾರದು ಎಂದೂ ಅಧ್ಯಕ್ಷರು ಮನವಿ ಮಾಡಿದ್ದಾರೆ. ಮುಂದೆ ಹೀಗಾಗದಂತೆಯೂ ಕ್ರಮ ವಹಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.
Kshetra Samachara
06/04/2022 10:28 am