ಧಾರವಾಡ: ಗುರುಪೂರ್ಣಿಮೆ ಅಂಗವಾಗಿ ಧಾರವಾಡದ ಶ್ರೀಸಾಯಿ ಪದವಿಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ಗುರು ವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಗುರುಗಳ ಮೇಲೆ ಪುಷ್ಪಮಳೆಗರೆದು ಪುಷ್ಪ ನಮನ ಸಲ್ಲಿಸಿದರು. ನಂತರ ಗುರುಕುಲ ಪದ್ಧತಿ ಪ್ರಕಾರ ಗುರುಗಳ ಪಾದ ಪೂಜೆ ಮಾಡುವ ಮೂಲಕ ಗುರುಪೂರ್ಣಿಮೆ ಅರ್ಥ ತಿಳಿಸಿಕೊಟ್ಟರು.
ನಂತರ ನಡೆದ ವೇದಿಕೆ ಕಾರ್ಯಕ್ರಮವನ್ನು ನಿವೃತ್ತ ಪ್ರಾಚಾರ್ಯ ಡಾ.ಬಿ.ಸಿ.ಬಿರಾದಾರ ಅವರು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ, ವಿದ್ಯಾರ್ಥಿ ಜೀವನ ಹಾಗೂ ಶಿಕ್ಷಣದ ಪ್ರಾಮುಖ್ಯತೆಯನ್ನು ತಿಳಿಸಿಕೊಟ್ಟರು. ಕಾಲೇಜಿನ ಅಧ್ಯಕ್ಷರಾದ ಡಾ.ವೀಣಾ ಬಿರಾದಾರ ಮಾತನಾಡಿ, ವಿದ್ಯಾರ್ಥಿಗಳು ಗುರುಕುಲ ಪದ್ಧತಿ ಪ್ರಕಾರ ಗುರುಪೂರ್ಣಿಮೆ ಆಚರಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇನ್ನೋರ್ವ ಅತಿಥಿ ಮಂಜುಳಾ ಬಿರಾದಾರ ಮಾತನಾಡಿ, ವಿದ್ಯಾರ್ಥಿಗಳು ಪ್ರಾಮಾಣಿಕತೆ, ಉತ್ಸಾಹವನ್ನು ಬೆಳೆಸಿಕೊಂಡು ಸಾಧನೆಯತ್ತ ದೃಷ್ಠಿ ನೆಡಬೇಕು ಎಂದರು. ಡಾ.ಎಸ್.ಬಿ ಗಾಡಿ, ಪ್ರಾಚಾರ್ಯ ಪ್ರೊ.ನಾಗರಾಜ ಶಿರೂರ ಸೇರಿದಂತೆ ಕಾಲೇಜಿನ ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Kshetra Samachara
14/07/2022 01:10 pm