ಧಾರವಾಡ: ಸತತವಾದ ಪ್ರಾಮಾಣಿಕ ಪ್ರಯತ್ನದಿಂದ ಯಶಸ್ಸು ಹೊಂದಲು ಸಾಧ್ಯವೆಂದು ಆರೋಗ್ಯ ಇಲಾಖೆಯ ಡಾ. ಟಿ. ಪಿ. ಮಂಜುನಾಥ ಹೇಳಿದರು.ಕ್ಲಾಸಿಕ್ ಕೆಎಎಸ್/ಐಎಎಸ್ ಸ್ಟಡಿ ಸರ್ಕಲ್‍ನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಸಿದ್ಧತೆ ಕುರಿತು ಆಯೋಜಿಸಲಾಗಿದ್ದ ಉಚಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಗತ್ಯ ಅಧ್ಯಯನ ಸಾಮಗ್ರಿಗಳನ್ನು ಬಳಸಿಕೊಂಡು ಸಮಯ ಪಾಲನೆಯೊಂದಿಗೆ ಶ್ರದ್ಧಾಪೂರ್ವಕ ಅಧ್ಯಯನದಿಂದ ಫಲ ಪಡೆಯಬೇಕೆಂದು ಹೇಳಿದರು.
ಅತಿಥಿಗಳಾಗಿದ್ದ ಪ್ರೊ.ಖಾನ್ ಕಟ್ಟಿಮನಿ ಮಾತನಾಡಿ, ಪರೀಕ್ಷೆ ಹತ್ತಿರ ಬಂದಾಗಲೇ ಅಧ್ಯಯನಕ್ಕೆ ಅಣಿಗೊಳ್ಳುವ ಬದಲು ಸಾಕಷ್ಟು ಮುಂಚಿತವಾಗಿಯೇ ಮಾರ್ಗದರ್ಶನ ಪಡೆಯಬೇಕು. ಈ ನಿಟ್ಟಿನಲ್ಲಿ ಮಾಹಿತಿ ಕಾರ್ಯಗಾರಗಳು ಪರೀಕ್ಷಾರ್ಥಿಗಳಿಗೆ ಪೂರಕವಾಗಿವೆ ಎಂದು ಹೇಳಿದರು.
ಡಾ. ಗಿರಿಜಾ ಹಿರೇಮಠ, ಪ್ರೊ ವಿಜಯಲಕ್ಷ್ಮೀ ಹುನಗುಂದ ಅತಿಥಿಗಳಾಗಿದ್ದರು. ಶಿಬಿರದಲ್ಲಿ ಕನ್ನಡ, ಇಂಗ್ಲೀಷ್, ಮನೋವಿಜ್ಞಾನ ಮುಂತಾದ ವಿಷಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡಿದರು.ಕ್ಲಾಸಿಕ್ ತರಬೇತಿ ವಿಭಾಗದ ವ್ಯವಸ್ಥಾಪಕ ದೀಪಕ ಜೋಡಂಗಿ ಸ್ವಾಗತಿಸಿದರು. ಬಸವರಾಜ ಕುಪ್ಪಸಗೌಡ್ರ ನಿರೂಪಿಸಿ ವಂದಿಸಿದರು. ರಾಜ್ಯದ ವಿವಿಧ ಜಿಲ್ಲೆಗಳ ನೂರಾರು ಪರೀಕ್ಷಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು.
Kshetra Samachara
13/09/2022 10:16 pm