ಕುಂದಗೋಳ : ಕಳೆದೆರಡು ವರ್ಷಗಳಿಂದ ಕಾಡಿದ ಕೊರೊನಾ ಕಹಿ ದಿನಗಳನ್ನು ಕಳೆದು ಶಿಕ್ಷಣಕ್ಕಾಗಿ ಹಂಬಲಿಸಿ ಸರ್ಕಾರಿ ಶಾಲೆ ಕಡೆ ಮುಖ ಮಾಡಿದ ಮಕ್ಕಳಿಗೆ ಶಿಕ್ಷಕರ ಕೊರತೆ ಕೂಗು ಕಾಡುತ್ತಿದೆ.
ಕುಂದಗೋಳ ತಾಲೂಕಿನ ರೈತಾಪಿ ಮಕ್ಕಳ ಭವಿಷ್ಯ ರೂಪಿಸಬೇಕಾದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 135 ಖಾಯಂ ಶಿಕ್ಷಕರ ಹುದ್ದೆ ಖಾಲಿಯಿದ್ದು ಅದರಲ್ಲಿ ಕೇವಲ 60 ಹುದ್ದೆಗಳನ್ನು ಅತಿಥಿ ಶಿಕ್ಷಕರಿಂದ ತುಂಬಲಾಗಿದೆ. ಮುಖ್ಯವಾಗಿ ಪ್ರೌಢಶಾಲೆಗಳಲ್ಲಿ ಖಾಯಂ ಶಿಕ್ಷಕರ 30 ಹುದ್ದೆ ಖಾಲಿಯಿದ್ದು, ಅದರಲ್ಲಿ 25 ಹುದ್ದೆಗಳನ್ನು ಅತಿಥಿ ಶಿಕ್ಷಕರಿಂದ ಭರ್ತಿ ಮಾಡಲಾಗಿದೆ.
ಆದ್ರೇ, ಪ್ರಾಥಮಿಕ ಶಾಲೆಗಳಲ್ಲಿ ಇನ್ನೂ 45 ಹುದ್ದೆಗಳು ಖಾಯಂ ಮತ್ತು ಅತಿಥಿ ಶಿಕ್ಷಕರಿಲ್ಲದ ಪರಿಣಾಮ ಖಾಲಿಯಿದ್ದು ಮಕ್ಕಳಿಗೆ ಸೂಕ್ತ ಪಾಠ ಬೋಧನೆ ಕೊರತೆಯಿಂದ ಶೈಕ್ಷಣಿಕ ಪ್ರಗತಿ ಕುಂಠಿತವಾಗುತ್ತಿದೆ. ಇದಲ್ಲದೆ ಪ್ರೌಢ ಶಾಲೆಗಳಲ್ಲಿ 5 ಹುದ್ದೆ ಖಾಯಂ ಮತ್ತು ಅತಿಥಿ ಶಿಕ್ಷಕರಿಲ್ಲದೆ ಖಾಲಿಯಿದ್ದು ಪ್ರಮುಖವಾಗಿ ಪಿಸಿಎಮ್, ಸಿಬಿಝಡ್, ಹಿಂದಿ ವಿಷಯ ತಲಾ ಒಂದೊಂದು ಮತ್ತು ಇಂಗ್ಲಿಷ್ ಎರಡು ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಕುಂದಗೋಳ ತಾಲೂಕಿನಲ್ಲೇ ಅತಿಥಿ ಶಿಕ್ಷಕರ ಬರ ಎದುರಾಗಿದೆ.
ಒಟ್ಟು ಪ್ರಾಥಮಿಕ ಪ್ರೌಢ ಶಾಲೆ ಸೇರಿ ಕುಂದಗೋಳ ತಾಲೂಕಿನಲ್ಲಿ 50 ಶಿಕ್ಷಕರ ಹುದ್ದೆಗಳು ಖಾಲಿಯಿದ್ದು ಪ್ರಾಥಮಿಕ ಹಂತದಲ್ಲಿ ಭದ್ರವಾಗಬೇಕಾದ ಮಕ್ಕಳ ಶೈಕ್ಷಣಿಕ ತಳಹದಿ ಸಮರ್ಪಕ ಕಲಿಕೆಯಿಂದ ಹಿಂದುಳಿದಿದೆ.
ಇನ್ನೂ ಅತಿಥಿ ಶಿಕ್ಷಕರಿಗೆ ಸರ್ಕಾರ ನೀಡುತ್ತಿರುವ ಕನಿಷ್ಠ ವೇತನ ಕಡಿಮೆ ಎನಿಸಿದ್ದು ಖಾಲಿ ಇರುವ ಹುದ್ದೆಗೆ ಬಿ.ಎಡ್, ಡಿ.ಎಡ್ ಪದವೀಧರರು ಆಸಕ್ತಿ ತೋರುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿವೆ.
ಒಟ್ಟಾರೆ ಸರ್ಕಾರವೇ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಮುಂದೂಡಿದಷ್ಟು ಗ್ರಾಮೀಣ ಭಾಗದ ರೈತಾಪಿ ಮಕ್ಕಳ ಭವಿಷ್ಯ ಗಾಳಿ ಗೋಪುರವಾಗುತ್ತಿದೆ.
- ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್ ಕುಂದಗೋಳ
Kshetra Samachara
17/06/2022 02:36 pm