ಧಾರವಾಡ: ವಿಶ್ವವಿದ್ಯಾಲಯಗಳ ನಿಯಮಾವಳಿ ಪ್ರಕಾರ ಯಾವುದೇ ಒಬ್ಬ ಸಿಬ್ಬಂದಿಯ ಸಂಬಂಧಿ ಪರೀಕ್ಷೆಗೆ ಹಾಜರಾಗಿದ್ದರೆ ಅಂತಹ ಸಿಬ್ಬಂದಿಯನ್ನು (ಪ್ರಶ್ನೆ ಪತ್ರಿಕೆ ಸೆಟ್ಟಿಂಗ್, ಪರೀಕ್ಷಾ ಕೊಠಡಿ ಮೇಲ್ವಿಚಾರಣೆ, ಮೌಲ್ಯಮಾಪನ ಇತ್ಯಾದಿ) ಪರೀಕ್ಷಾ ಕರ್ತವ್ಯದಿಂದ ಹೊರಗಿಡಲಾಗುವುದು. ಒಂದು ವೇಳೆ ಈ ವಿಷಯವನ್ನು ಮುಚ್ಚಿಟ್ಟರೆ ಸಿಬ್ಬಂದಿ ಮೇಲೆ ಕ್ರಮ ಕೂಡ ಕೈಗೊಳ್ಳಬಹುದಾಗಿದೆ. ಆದರೆ, ವಿಶ್ವವಿದ್ಯಾಲಯದ ವಿದ್ಯಾರ್ಥಿ ಅದೇ ವಿಶ್ವವಿದ್ಯಾಲಯದ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಬಹುದೇ? ಇದಕ್ಕೆ ಕಾನೂನಿನಲ್ಲಿ ಅವಕಾಶವಿದೆಯೆ? ಎಂಬ ಪ್ರಶ್ನೆ ಇದೀಗ ಹುಟ್ಟಿಕೊಂಡಿದೆ. ಇದಕ್ಕೆ ಸಾಕ್ಷಿಯಾಗಿದೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ.
ಹೌದು! ಕವಿವಿಯ ಹಾಲಿ ಕುಲಸಚಿವರೇ ಸಂಶೋಧನಾ ವಿದ್ಯಾರ್ಥಿಯಾಗಿರುವುದು ಇಂತಹ ಪ್ರಶ್ನೆ ಉದ್ಭವಿಸುವಂತೆ ಮಾಡಿದೆ. ಆಡಳಿತ ವಿಭಾಗದ ಕುಲಸಚಿವ ಡಾ.ಹನುಮಂತಪ್ಪ ವರ್ಗಾವಣೆಯ ನಂತರ ಅವರ ಸ್ಥಾನದಲ್ಲಿ ಕುಳಿತ ಮತ್ತೊಬ್ಬ ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಹಿಂದಿನ ಧಾರವಾಡ ವಿಭಾಗ ಅರಣ್ಯ ಇಲಾಖೆ ಡಿಸಿಎಫ್ ಯಶಪಾಲ್ ಕ್ಷೀರಸಾಗರ ಅವರು ವಿಶ್ವವಿದ್ಯಾಲಯದ ಬಯೋ ಟೆಕ್ನಾಲಜಿ ವಿಭಾಗದಲ್ಲಿ ಸಂಶೋಧನೆ (ಪಿಎಚ್‌ಡಿ) ಮಾಡುತ್ತಿದ್ದಾರೆ.
ಯುಜಿಸಿ, ಪಿಎಚ್‌ಡಿ ಗೈಡಲೈನ್ಸ್ ಪ್ರಕಾರ ವಿಶ್ವವಿದ್ಯಾಲಯದ ಆಡಳಿತ ವಿಭಾಗದ ಕುಲಸಚಿವರೇ ವಿವಿಯ ಮುಖ್ಯ ಅಧಿಕಾರಿಗಳಾಗಿದ್ದು, ಕೋರ್ಸ್ ವರ್ಕ್, ನೋಟಿಫಿಕೇಶನ್, ಮೌಲ್ಯಮಾಪನ ವರದಿ, ಪ್ರಗತಿ ವರದಿ ಸಹಿತ ಎಲ್ಲವನ್ನೂ ಕುಲಸಚಿವರಿಗೇ ಸಾದರಪಡಿಸಬೇಕಿದ್ದು, ಆದರೆ, ಅವರದ್ದೇ ಪಿಎಚ್‌ಡಿ ಪ್ರಕ್ರಿಯೆ ಹೇಗೆ ನಿಭಾಯಿಸುತ್ತಾರೆಂಬುದು ಅಚ್ಚರಿ ಹುಟ್ಟಿಸಿದೆ.
ಸದ್ಯ ಯಶಪಾಲ್ ಕ್ಷೀರಸಾಗರ ಅವರಿದ್ದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗೆ ಅವರ ಪತ್ನಿ ಸೋನಾಲ್ ಯಶಪಾಲ್ ಅವರೇ ನೇಮಕಗೊಂಡಿದ್ದಾರೆ. ಇವರಿಬ್ಬರೂ ಕೂಡ ಕವಿವಿಯ ಬಯಟೆಕ್ನಾಲಜಿ ವಿಭಾಗದಲ್ಲೇ ಸಂಶೋಧನೆ ಮಾಡುತ್ತಿದ್ದಾರೆ. ಗಂಡ, ಹೆಂಡತಿ ಇಬ್ಬರಿಗೂ ಪ್ರೊ.ವೇದಮೂರ್ತಿ ಮಾರ್ಗದರ್ಶಕರಾಗಿದ್ದಾರೆ. ಯಶಪಾಲ್ ಅವರು ಪಿಎಚ್‌ಡಿಗಾಗಿ ಒಂದೂವರೆ ವರ್ಷದ ಹಿಂದೇ ಕವಿವಿಯಲ್ಲಿ ಹೆಸರು ನೋಂದಾಯಿಸಿದ್ದರು.
ಸಾಮಾನ್ಯವಾಗಿ ಪದವಿ ಕಾಲೇಜಿನ ಪ್ರಾಧ್ಯಾಪಕರುಗಳಿಗೆ ಪಿಎಚ್‌ಡಿ ಮಾಡಲು 2 ವರ್ಷಗಳ ಎಫ್ಐಪಿ ಅವಕಾಶ ಹಾಗೂ ವಾರ್ಷಿಕ ಮತ್ತು ಅರ್ಧ ವಾರ್ಷಿಕ ರಜೆಗಳಿರುತ್ತವೆ. ಆದರೆ ಅರಣ್ಯಾಧಿಕಾರಿಗಳಿಗೆ ಇಂತಹ ರಜೆ ಇರುವುದಿಲ್ಲ ಅಲ್ಲದೇ 6 ತಿಂಗಳ ಕೋರ್ಸ್ ವರ್ಕ ಹೇಗೆ ಮಾಡುತ್ತಾರೆ ಅಲ್ಲದೇ ಸಂಶೋಧನೆ ಪ್ರಬಂಧ ಯಾವಾಗ ಹೇಗೆ ಮಾಡುತ್ತಾರೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ.
ಈ ವಿಷಯದ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ಕವಿವಿ ಕುಲಕಸಚಿವ ಯಶಪಾಲ್, ಇದು ಸರ್ಕಾರದ ಆದೇಶವಾಗಿದೆ. ಪಿಎಚ್‌ಡಿ ಮಾಡುವ ವಿಷಯವನ್ನು ಸರ್ಕಾರದ ಗಮನಕ್ಕೆ ನಾನು ಮೊದಲೇ ತಂದಿದ್ದೇನೆ ಆದರೆ, ಸರ್ಕಾರವೇ ನನ್ನನ್ನು ಕುಲಸಚಿವನನ್ನಾಗಿ ನೇಮಕ ಮಾಡಿದೆ. ಇದರಲ್ಲಿ ನಿಯಮ ಉಲ್ಲಂಘನೆಯಾಗಿಲ್ಲ. ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆಯೋ ನೋಡೋಣ ಎಂದಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
23/04/2022 07:10 pm