ಧಾರವಾಡ: ವಿಶ್ವದ ವಿದ್ಯಮಾನಗಳ ಅವಲೋಕನದಲ್ಲಿ ವಿಭಿನ್ನ ಕ್ಷೇತ್ರಗಳ ಅತ್ಯಮೂಲ್ಯ ಜ್ಞಾನ ಸಂಪಾದನೆಯ ಜೊತೆಗೆ ಮನುಷ್ಯ ಜಗತ್ತಿಗೆ ತೆರೆದುಕೊಳ್ಳಲು ಇಂಗ್ಲೀಷ್ ಜ್ಞಾನ ಅತೀ ಅಗತ್ಯವಾಗಿದೆ ಎಂದು ಬೆಂಗಳೂರಿನ ದಕ್ಷಿಣ ಭಾರತ ವಲಯದ ಪ್ರಾದೇಶಿಕ ಆಂಗ್ಲಭಾಷಾ ಸಂಸ್ಥೆಯ ನಿರ್ದೇಶಕರಾದ ಡಾ.ಬಿ.ಕೆ.ಎಸ್.ವರ್ಧನ್ ಪ್ರತಿಪಾದಿಸಿದರು.
ಅವರು ಶುಕ್ರವಾರ ಧಾರವಾಡದ ಪ್ರತಿಷ್ಠಿತ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಡಯಟ್ ಉಪನ್ಯಾಸಕರು, ಬಿ.ಆರ್.ಸಿ. ಸಮನ್ವಯಾಧಿಕಾರಿಗಳು, ಬಿ.ಆರ್.ಪಿ., ಸಿ.ಆರ್.ಪಿ ಹಾಗೂ ಜಿಲ್ಲೆಯ ವಿವಿಧ ಸಂಪನ್ಮೂಲ ವ್ಯಕ್ತಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಪ್ರಾಥಮಿಕ ಶಾಲಾ ಹಂತದಿಂದಲೇ ಆಂಗ್ಲಭಾಷಾ ಕಲಿಕೆಗೆ ಮಾರ್ಗದರ್ಶನ ಮಾಡಲು ಶಿಕ್ಷಕ-ಶಿಕ್ಷಕಿಯರು ನಿಖರ ನೆಲೆಯಲ್ಲಿ ಶ್ರಮಿಸುವ ಅಗತ್ಯವಿದೆ. ಇಂದು ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯಲು ಇಂಗ್ಲೀಷ್ ಕಲಿಕೆಯ ಕಠಿಣತೆಯೂ ಕೂಡ ಒಂದು ಕಾರಣವಾಗಿದೆ. ಹೀಗಾಗಿ ಪ್ರಾಥಮಿಕ ಹಂತದಲ್ಲಿಯೇ ಪ್ರತೀ ಮಗುವಿನ ಇಂಗ್ಲೀಷ್ ಕಲಿಕಾ ಕಂದಕಗಳನ್ನು ಗುರುತಿಸಿ ಅದರ ನಿವಾರಣೆಗೆ ಶಾಲೆ, ಕ್ಲಸ್ಟರ್, ತಾಲೂಕು ಮತ್ತು ಜಿಲ್ಲಾ ಹಂತಗಳಲ್ಲಿ ಇಂಗ್ಲೀಷ್ ಭಾಷಾ ಬೋಧನೆಯ ಶೈಕ್ಷಣಿಕ ಯೋಜನೆ ರೂಪಿಸಬೇಕು ಎಂದರು.
ಸರ್ಕಾರಿ ಶಾಲೆಗಳು ಬ್ರ್ಯಾಂಡ್ ಆಗಲಿ: ಜವಾಹರ ನವೋದಯ ವಿದ್ಯಾಲಯದ ಮಾದರಿಯಲ್ಲಿ ರಾಜ್ಯದಲ್ಲಿಯ ಪ್ರತಿಯೊಂದೂ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಬ್ರ್ಯಾಂಡ್ ಆಗುವಂತೆ ನೋಡಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ಕರ್ನಾಟಕ ಪಬ್ಲಿಕ್ ಸ್ಕೂಲ್ ಚಿಂತನೆ ಅಂಕುರಿಸಿದ್ದು, ಶಿಕ್ಷಣದ ಗುಣಮಟ್ಟವನ್ನು ಅಧಿಕಗೊಳಿಸಲು ಇಲಾಖೆಯ ಎಲ್ಲ ಭಾಗೀದಾರರೂ ಶ್ರಮಿಸಬೇಕಾಗಿದೆ. ಸರ್ಕಾರಿ ಶಾಲೆಗಳಲ್ಲಿ ಉಲ್ಲಾಸದ ಕಲಿಕೆಯೊಂದಿಗೆ ಗುಣಮಟ್ಟವನ್ನು ಕಾಯ್ದುಕೊಂಡು ಅತ್ಯಧಿಕ ಕಲಿವಿನಫಲವನ್ನು ನಮ್ಮ ಪಾಲಕರು ಮತ್ತು ಪೋಷಕರು ಶ್ಲ್ಯಾಘಿಸುವಂತಾಗಬೇಕೆಂದೂ ಡಾ.ವರ್ಧನ್ ಹೇಳಿದರು.
ಎಸ್.ಎಸ್.ಎಲ್.ಸಿ. ವ್ಯಾಸಂಗ ಮಾಡುತ್ತಿರುವ ಪ್ರತೀ ಮಗುವೂ ಸಹ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಗೆ ಹಾಜರಾಗಲು ಅಧಿಕೃತವಾಗಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಪ್ರೌಢ ಶಾಲಾ ಮುಖ್ಯ ಶಿಕ್ಷಕರು ಆಸಕ್ತಿವಹಿಸಬೇಕು ಎಂದೂ ಡಾ.ವರ್ಧನ್ ಅವರು ಹೇಳಿದರು.
ದಕ್ಷಿಣ ಭಾರತದ ಕರ್ನಾಟಕ, ಕೇರಳ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಲಕ್ಷದ್ವೀಪ ರಾಜ್ಯಗಳ ವ್ಯಾಪ್ತಿಯನ್ನು ಹೊಂದಿರುವ ಬೆಂಗಳೂರಿನ ಪ್ರಾದೇಶಿಕ ಆಂಗ್ಲಭಾಷಾ ಸಂಸ್ಥೆಯ ನಿರ್ದೇಶಕರ ಹುದ್ದೆಗೆ ನೇಮಕಗೊಂಡಿರುವ ಡಾ. ಬಿ.ಕೆ.ಎಸ್.ವರ್ಧನ್ ಅವರನ್ನು ಇದೇ ಸಂದರ್ಭದಲ್ಲಿ ಡಯಟ್ ವತಿಯಿಂದ ಗೌರವಿಸಲಾಯಿತು. ಜಿಲ್ಲಾ ಶಿಕ್ಷಣ ಇಲಾಖೆಯ ಅಭಿವೃದ್ಧಿ ಉಪನಿರ್ದೇಶಕಿ ಎನ್.ಕೆ.ಸಾವಕಾರ, ಡಯಟ್ ಹಿರಿಯ ಉಪನ್ಯಾಸಕರುಗಳಾದ ಜಯಶ್ರೀ ಕಾರೇಕಾರ, ವೈ.ಬಿ.ಬಾದವಾಡಗಿ, ಪಾರ್ವತಿ ವಸ್ತ್ರದ, ಶಿವಾನಂದ ಮಲ್ಲಾಡದ, ಡಾ.ಶೋಭಾವತಿ ನಾಯ್ಕರ್, ಜೆ.ಜಿ. ಸೈಯ್ಯದ್, ಡಯಟ್ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇದ್ದರು.
Kshetra Samachara
28/01/2022 10:06 pm