ಧಾರವಾಡ: ಕೃಷಿ ಕ್ಷೇತ್ರದ ಸಂಶೋಧನೆಗಳು ಅನ್ವೇಷಣಾತ್ಮಕವಾಗಿದ್ದು ರೈತರು ಹಾಗೂ ದೇಶದ ಸುಸ್ಥಿರ ಅಭಿವೃದ್ಧಿಗೆ ಪರಿಣಾಮಕಾರಿಯಾದ ಕೊಡುಗೆಗಳನ್ನು ನೀಡಿದಾಗ ಅವುಗಳ ಮೌಲ್ಯ ಹೆಚ್ಚಾಗುತ್ತದೆ. ವಿಶ್ವಸಂಸ್ಥೆ ಗೊತ್ತುಪಡಿಸಿರುವ ಸಾಮಾಜಿಕ ಹಾಗೂ ಸುಸ್ಥಿರ ಅಭಿವೃದ್ಧಿಯ ಗುರಿ ತಲುಪಲು ಭಾರತ ಸಮರ್ಥವಾಗಿದೆ. ಕೃಷಿ ಕ್ಷೇತ್ರದ ಸಂಶೋಧಕರು ಮತ್ತು ವಿದ್ಯಾರ್ಥಿಗಳು ಹೊಸ ಅನ್ವೇಷಣಾತ್ಮಕ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸೆಲ್ಕೊ ಇಂಡಿಯಾ ಸಂಸ್ಥಾಪಕ ಹಾಗೂ ಅಧ್ಯಕ್ಷ ಡಾ.ಹರೀಶ ಹಂದೆ ಹೇಳಿದರು.
ಧಾರವಾಡದ ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಸೋಮವಾರ ಜರುಗಿದ 34 ನೇ ಘಟಿಕೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೃಷಿ ಕ್ಷೇತ್ರದ ಸಂಶೋಧಕರು ಮೂರು ಎಕರೆಗಿಂತಲೂ ಕಡಿಮೆ ಭೂಮಿ ಹೊಂದಿರುವ ರೈತನ ಸಮಗ್ರ ಕಲ್ಯಾಣ ಗಮನದಲ್ಲಿಟ್ಟುಕೊಂಡು ಸಂಶೋಧನೆಗಳನ್ನು ಕೈಗೊಳ್ಳಬೇಕು. ಮುಂಬರುವ 25 ವರ್ಷಗಳ ಅವಧಿಯಲ್ಲಿ ರೈತರ ಬದುಕು ಸಮೃದ್ಧವಾಗಿಸಲು ಕೃಷಿ ಪದವೀಧರರ ಜ್ಞಾನ ಸದ್ಬಳಕೆಯಾಗಬೇಕು. 40 ವರ್ಷಗಳ ಕಾಲ ಕಬ್ಬು ಬೆಳೆದ ಅನುಭವಿ ರೈತನಿಗೆ ಸಿಗದ ಪದವಿಗಳು, ಕೃಷಿ ವಿದ್ಯಾರ್ಥಿಗಳಿಗೆ ದೊರೆಯುತ್ತವೆ. ಅನುಭವಿ ಕೃಷಿಕರ ಸಲಹಾ ಮಂಡಳಿ ಸಕ್ರಿಯವಾಗಿರಬೇಕು. ನಿಜವಾದ ರೈತರು ಶಿಕ್ಷಣ, ಸಂಶೋಧನೆಯ ಪಾಲುದಾರರಾಗಬೇಕು. ಮೊಬೈಲ್ ಅಪ್ಲಿಕೇಷನ್, ಸಾಫ್ಟವೇರ್‌ಗಳ ಕ್ಷೇತ್ರದಲ್ಲಿ ಮಾತ್ರ ಹೊಸ ಆವಿಷ್ಕಾರಗಳಾಗಬೇಕಿಲ್ಲ, ಉತ್ತಮ ಟಿಲ್ಲರ್, ಕಡಿಮೆ ನೀರು ಬಳಸಿ ಬೆಳೆಯುವ ಹೈಡ್ರೋಪೋನಿಕ್ಸ್, ಸಿರಿಧಾನ್ಯಗಳ ಬೆಳೆ ಹಾಗೂ ಮೌಲ್ಯವರ್ಧನೆ ಮೊದಲಾದ ರಂಗಗಳಲ್ಲಿ ಅನ್ವೇಷಣೆ ನಡೆಯುವುದು ಅಗತ್ಯವಾಗಿದೆ. ವಿಶ್ವಸಂಸ್ಥೆ ಗೊತ್ತುಪಡಿಸಿರುವ ಸುಸ್ಥಿರ ಅಭಿವೃದ್ಧಿಯನ್ನು 2030 ರೊಳಗೆ ಸಾಧಿಸಲು ವಿದ್ಯಾರ್ಥಿಗಳು ಇಂದಿನಿಂದಲೇ ಕಾರ್ಯಪ್ರವೃತ್ತರಾದರೆ ಮಾತ್ರ ಭಾರತವನ್ನು ಬದಲಿಸಬಹುದು ಎಂದರು.
ಇದಕ್ಕೂ ಮೊದಲು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ನಂತರ 53 ಚಿನ್ನದ ಪದಕ ಹಾಗೂ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ 9 ನಗದು ಬಹುಮಾನಗಳು ಸೇರಿದಂತೆ 63 ಪಿಎಚ್ಡಿ, 247 ಸ್ನಾತಕೋತ್ತರ ಹಾಗೂ 601 ಸ್ನಾತಕ ಪದವಿ ಒಟ್ಟಾರೆ 911 ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಕುಲಪತಿ ಡಾ. ಮಹಾದೇವ ಚೆಟ್ಟಿ ವಿವಿಧ ಗಣ್ಯರು ಉಪಸ್ಥಿತರಿದ್ದರು.
Kshetra Samachara
18/10/2021 03:21 pm