ಹುಬ್ಬಳ್ಳಿ: ರಾಜ್ಯ ಸರ್ಕಾರದ ವ್ಯಾಪ್ತಿಯ ಪಿಎಸ್‌ಐ, ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ಅಕ್ರಮ ನೇಮಕಾತಿ ಹಗರಣ ಹೊರಬಂದ ಬೆನ್ನಲ್ಲೇ, ರೈಲ್ವೆ ಇಲಾಖೆಯಲ್ಲಿಯೂ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ಫೇಕ್ ನೋಟಿಫಿಕೇಷನ್ ಹಾಗೂ ನೇಮಕಾತಿ ಪಟ್ಟಿ ಹರಿದಾಡ್ತಿರೋದು ʼರೈಲ್ವೆʼಯನ್ನು ಚಿಂತೆಗೀಡುಮಾಡಿದೆ.
ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ ಜಿಎಂ ಕೋಟಾದಡಿ ಟೆಕ್ನಿಕಲ್, ನಾನ್ ಟೆಕ್ನಿಕಲ್ 2800 ಹುದ್ದೆಗಳಿಗೆ ಫೇಕ್ ಅರ್ಜಿ ಆಹ್ವಾನಿಸಲಾಗಿತ್ತು. ಈ ಬಗ್ಗೆ 4 ದಿನಗಳ ಹಿಂದಷ್ಟೆ ʼಪಬ್ಲಿಕ್ ನೆಕ್ಸ್ಟ್ʼ ವರದಿ ಬಿತ್ತರಿಸಿತ್ತು. ಆದರೆ, ಸದ್ಯ ನಕಲಿ ನೇಮಕಾತಿ ಲಿಸ್ಟ್ ಕೂಡ ಹರಿದಾಡ್ತಿದೆ. ಈ ನಕಲಿ ಪ್ರತಿಯಲ್ಲಿ 8 ಜನ ಡಿ ಗ್ರೂಪ್ ನೌಕರರ ಹೆಸರುಗಳಿದ್ದು, ರೈಲ್ವೆಯಲ್ಲಿ ಕೆಲಸ ಕೊಡಿಸುತ್ತೇವೆಂದು ನಂಬಿಸಿ ಮೋಸ ಮಾಡುವ ರಾಕೆಟ್ , ಈ ನಕಲಿ ಲಿಸ್ಟ್ ಹಿಂದೆ ಇರುವ ಸಾಧ್ಯತೆಯಿದೆ. ಇವರಿಂದ ಹುಷಾರಾಗಿರಿ ಎಂದು ರೈಲ್ವೆ ಎಚ್ಚರಿಸಿದೆ.
ಈ ನಕಲಿ ನೋಟಿಫಿಕೇಶನ್‌ನಲ್ಲಿ ಜಿಎಂ ಸಹಿ- ಸೀಲು ಸಹ ಮಾಡಲಾಗಿದೆ. ಈ ಪತ್ರ ನೋಡಿದರೆ ನಕಲಿ ಎಂದು ಹೇಳಲು ಸಾಧ್ಯವೇ ಇಲ್ಲ. ಆದ್ರೆ, ಈ ರೀತಿ ಪತ್ರ, ನೋಟಿಫಿಕೇಶನ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ನಿರುದ್ಯೋಗಿಗಳನ್ನು ನಂಬಿಸಿ, ದುಡ್ಡು ನುಂಗುವ ಜಾಲವೇ ಇದೆ. ಈ ನಕಲಿ ಪಟ್ಟಿಯಲ್ಲಿ ಪ್ಲಾಯಿ ಕೋಡ್, ಸೀರಿಯಲ್ ನಂ. ಮತ್ತು ಬೆಂಗಳೂರಿನ ಸೆಂಟ್ರಲ್ ವರ್ಕ್ ಶಾಪ್ ನಲ್ಲಿ ರಿಪೋರ್ಟಿಂಗ್ ಮಾಡಲು ಸೂಚಿಸಲಾಗಿದೆ. ಇದ್ರಲ್ಲಿ ಬೆಂಗಳೂರು ವಿಭಾಗದ DRM ಸೀಲ್, ಸಹಿಯನ್ನೂ ನಕಲು ಮಾಡಲಾಗಿದೆ.
ರೈಲ್ವೆಯ ಯಾವುದೇ ಹುದ್ದೆಗಳಿದ್ದರೂ ಆರ್‌ಆರ್‌ಬಿ ಮೂಲಕವೇ ಮಾಡಿಕೊಳ್ಳಲಾಗುತ್ತೆ. ಜತೆಗೆ ಸಾರ್ವಜನಿಕರಿಗೆ ಸಲೀಸಾಗಿ ಸಿಗುವ ಮಾರ್ಗದ ಮೂಲಕವೇ ನೋಟಿಫಿಕೇಶನ್ ಹೊರಡಿಸಲಾಗುತ್ತೆ. ಹೀಗಾಗಿ ಇದೀಗ ಹರಿದಾಡುತ್ತಿರುವ ಪತ್ರ ಅಥವಾ ನೋಟಿಫಿಕೇಶನ್ ನಕಲಿಯಾಗಿದ್ದು, ನಿರುದ್ಯೋಗಿಗಳನ್ನು ವಂಚಿಸುವ ಜಾಲವೂ (ರಾಕೆಟರ್ಸ್) ಇದರಲ್ಲಿರುವ ಸಾಧ್ಯತೆಯಿದೆ. ರೈಲ್ವೆಯಲ್ಲಿ ಈ ರೀತಿ ನೇಮಕಾತಿಯಾಗುವುದಿಲ್ಲ ಎಂದು ಸಾಮಾಜಿಕ ಜಾಲತಾಣ ಮೂಲಕ ಜಾಗೃತಿ ಮೂಡಿಸುತ್ತಿದೆ. ಜತೆಗೆ ನಕಲಿ ಪತ್ರ ಅಥವಾ ನೋಟಿಫಿಕೇಶನ್ ಹೊರಡಿಸಿರುವ ಬಗ್ಗೆ ದೂರು ನೀಡಿ ತನಿಖೆ ನಡೆಸಲು ಮುಂದಾಗಿದೆ. ಜನ ಇಂತಹ ವಂಚನೆ ಜಾಲಕ್ಕೆ ಮರುಳಾಗದಿರಲಿ ಅನ್ನೋದೇ ನಮ್ಮ ಆಶಯ.
Kshetra Samachara
07/05/2022 06:37 pm