ಧಾರವಾಡ: ಅನುದಾನ ರಹಿತ ಹಾಗೂ ಅನುದಾನ ಸಹಿತ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ಬಿಡುಗಡೆ ಮಾಡುವುದು ಹಾಗೂ ಶಿಕ್ಷಕರಿಗೆ ವೇತನ ನೀಡುವುದು ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ
ಆಗ್ರಹಿಸಿ ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ಕಳೆದ ಕೆಲವು ದಿನಗಳಿಂದ ಶಿಕ್ಷಕರು ನಡೆಸುತ್ತಿದ್ದ ಪ್ರತಿಭಟನೆಯನ್ನು ಗುರುವಾರ ಕೈಬಿಟ್ಟಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ಸಿ.ಸಿ.ಪಾಟೀಲ ಅವರು ಶಿಕ್ಷಕರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಿಕ್ಷಕರು ಹಾಗೂ ಶಿಕ್ಷಣರಂಗದ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಮುಕ್ತ ಮನಸ್ಸು ಹೊಂದಿದೆ. ಕೊರೊನಾ ಕಾರಣದಿಂದ ಶಿಕ್ಷಣ ಕೇತ್ರದ ಮೇಲೆ ಉಂಟಾಗಿರುವ ಪರಿಣಾಮಗಳಿಂದ ಶಿಕ್ಷಕರೂ ಕೂಡ ಪರಿತಪಿಸುವಂತಾಗಿರುವುದು ಸರ್ಕಾರದ ಗಮನದಲ್ಲಿದೆ,
ಮುಂಬರುವ ಮೂರು ತಿಂಗಳ ಅವಧಿಯಲ್ಲಿ ಈ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಶಿಕ್ಷಕರ ಸಂಘಟನೆಗಳು ನಡೆಸುತ್ತಿರುವ ಹೋರಾಟ ಕೈ ಬಿಡಬೇಕು ಎಂದು ಸಚಿವರು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಎಸ್.ಸುರೇಶಕುಮಾರ ಅವರು ನೀಡಿರುವ ಪತ್ರವನ್ನು ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ ಅವರಿಗೆ ಹಸ್ತಾಂತರಿಸಿದ ಸಚಿವ ಸಿ.ಸಿ.ಪಾಟೀಲ ಅವರು,
ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಇರುವ ಜ್ಯೋತಿ ಸಂಜೀವಿನಿ ಯೋಜನೆಯನ್ನು ಅನುದಾನಿತ ಶಾಲೆಗಳ ಶಿಕ್ಷಕರಿಗೂ ವಿಸ್ತರಿಸುವುದು. ಕಾಲ್ಪನಿಕ ವೇತನ ಅನುಷ್ಠಾನದಿಂದ ಆಗುವ ಆರ್ಥಿಕ ಪರಿಣಾಮಗಳನ್ನು ಕೂಲಂಕಷವಾಗಿ ಪರಿಶೀಲಿಸಿ ವರದಿ ತಯಾರಿಸಲಾಗುವುದು.
ಅನುದಾನ ರಹಿತ ಖಾಸಗಿ ಶಾಲೆಗಳ ಶಿಕ್ಷಕರು ಮತ್ತು ಸಿಬ್ಬಂದಿಯ ಸೇವಾ ಭದ್ರತೆಗೆ ಕಠಿಣ ಸುತ್ತೋಲೆಯೊಂದಿಗೆ ವಿಚಕ್ಷಣಾ ವ್ಯವಸ್ಥೆ ಮತ್ತಿತರ ಕ್ರಮಗಳ ಬಗ್ಗೆ ಸರ್ಕಾರ ಸ್ಪಂದಿಸಲಿದೆ ಎಂದು ಭರವಸೆ ನೀಡಿದರು.
ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಶಿಕ್ಷಕರ ಪ್ರತಿಭಟನೆಗೆ ಸರ್ಕಾರ ಸ್ಪಂದಿಸಿ, ಸಚಿವರು ಖುದ್ದಾಗಿ ಬಂದು ಮಾತನಾಡಿರುವುದು ಸಮಾಧಾನ ತಂದಿದೆ. ಸತ್ಯಾಗ್ರಹವನ್ನು ಸದ್ಯ ಮೊಟಕುಗೊಳಿಸಲಾಗುವುದು ಎಂದರು.
Kshetra Samachara
17/12/2020 01:30 pm