ಹುಬ್ಬಳ್ಳಿ: ಕೊರೊನಾ ಹಾವಳಿಯಿಂದಾಗಿ, ಕೈಯಲ್ಲಿ ಕೆಲಸವಿಲ್ಲದೇ ಜೀವನ ನಡೆಸಲು ಹೆಣಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿಯೂ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ದಿಸೆಯಲ್ಲಿ, ಪೋಷಕರುವ ಖಾಸಗಿ ಶಾಲೆಗಳ ದುಬಾರಿ ಶುಲ್ಕ ಭರಿಸಲಾಗದೇ, ಸರ್ಕಾರಿ ಶಾಲೆಗಳತ್ತ ಮುಖ ಮಾಡಿದ್ದಾರೆ.
ಕೋವಿಡ್ ಸಂಕಷ್ಟದಿಂದಾಗಿ ಧಾರವಾಡ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಖಾಸಗಿ ಶಾಲೆಗಳ 2,932 ಮಕ್ಕಳು ಸರ್ಕಾರಿ ಶಾಲೆಗಳತ್ತ ಮುಖ ಮಾಡಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಒಟ್ಟು 1,520 ಸರ್ಕಾರಿ ಶಾಲೆಗಳಿದ್ದು, ಈಗಾಗಲೇ ಸುಮಾರು 3.23 ಲಕ್ಷ ಮಕ್ಕಳು ಪ್ರವೇಶ ಪಡೆದಿದ್ದಾರೆ.
ಕೋವಿಡ್ ಕಾರಣಕ್ಕೆ ಸಾಕಷ್ಟು ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲಾ ಪೋಷಕರು ದೊಡ್ಡಮಟ್ಟದ ಶುಲ್ಕ ಕಟ್ಟುವ ಪರಿಸ್ಥಿತಿಯಲ್ಲಿಲ್ಲ. ಹಾಗಾಗಿ, ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುತ್ತಿದ್ದಾರೆ. ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ದುಬಾರಿ ಶುಲ್ಕವನ್ನು ವಿಧಿಸಲಾಗುತ್ತದೆ. ಅಲ್ಲದೇ ಮಕ್ಕಳ ಪ್ರವೇಶಾತಿ ಶುಲ್ಕವನ್ನು ಭರಿಸುವಂತೆ ಒತ್ತಾಯ ಕೂಡ ಮಾಡಲಾಗುತ್ತದೆ. ಹೀಗಾಗಿ ಜನಸಾಮಾನ್ಯರ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ನೀಡುವುದು ಕಷ್ಟವಾಗಿದ್ದು, ಸರ್ಕಾರಿ ಶಾಲೆಗಳತ್ತ ಒಲವು ತೋರುತ್ತಿದ್ದಾರೆ.
ಸರ್ಕಾರವೂ, ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಹೀಗಾಗಿ ಶಾಲೆಗಳು ಆರಂಭಕ್ಕೂ ಮುನ್ನವೇ ಭಾರೀ ಬೇಡಿಕೆ ನಿರ್ಮಾಣವಾಗಿದ್ದು, ಸರ್ಕಾರಿ ಶಾಲೆಗಳಲ್ಲಿ ಪ್ರವೇಶಾತಿ ಜೋರಾಗಿಯೇ ನಡೆದಿದೆ. ಆದರೆ, ಮಹಾಮಾರಿ ಕೋವಿಡ್ ನ ಆತಂಕ ಮಕ್ಕಳು ಮತ್ತು ಪೋಷಕರಲ್ಲಿ ಹೆಚ್ಚಾಗಿದ್ದು, ಅವೆಲ್ಲವನ್ನೂ ಮೀರಿ ಸರ್ಕಾರ ಶಾಲೆಗಳ ಆರಂಭಕ್ಕೆ ಯಾವಾಗ ಗ್ರೀನ್ ಸಿಗ್ನಲ್ ಕೊಡೊತ್ತೊ ಕಾದು ನೋಡಬೇಕಿದೆ......!
Kshetra Samachara
28/10/2020 03:56 pm