ಧಾರವಾಡ: ಸಮಗ್ರ ಶಿಕ್ಷಣ ನೀತಿ ಜಾರಿಗೆ ತರಬೇಕು ಹಾಗೂ ಶಿಕ್ಷಣ ಸಚಿವರ ದ್ವಂದ್ವ ಹೇಳಿಕೆ ಖಂಡಿಸಿ ಖಾಸಗಿ ಶಾಲಾಭಿವೃದ್ಧಿ ಸಂಸ್ಥೆಯ ನೇತೃತ್ವದಲ್ಲಿ ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಗಳ ಸದಸ್ಯರು ಹಾಗೂ ಶಿಕ್ಷಕರು ಬುಧವಾರ ಧಾರವಾಡದ ಆಲೂರು ವೆಂಕಟರಾವ್ ಸಭಾಭವನದ ಹತ್ತಿರ ಒಂದು ದಿನದ ಸಾಂಕೇತಿಕ ಧರಣಿ ನಡೆಸಿದರು.
ಶಿಕ್ಷಣ ಸಚಿವರು ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ, ಪಾಲಕರ ಹಾಗೂ ವಿದ್ಯಾರ್ಥಿ ಸಮೂಹ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದು, ಇದರಿಂದ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ತಕ್ಷಣ ಶಿಕ್ಷಣ ಸಚಿವರು ಖಾಸಗಿ ಶಾಲೆಗಳ ಬಗ್ಗೆ ಹೊಂದಿದ ನಿಲವು ಸ್ಪಷ್ಟಪಡಿಸಲು ಆಗ್ರಹಿಸಿದರು.
ಸರ್ಕಾರ ಖಾಸಗಿ ಹಾಗೂ ಸರ್ಕಾರಿ ಶಾಲೆಗಳ ಬಗ್ಗೆ ಸಾಕಷ್ಟು ತಾರತಮ್ಯ ನೀತಿ ಅನುಸರಿಸುತ್ತಿದೆ. ಬೆಂಗಳೂರು ನಗರದ ಖಾಸಗಿ ಶಾಲೆಗಳನ್ನು ಕೇಂದ್ರಕರಿಸಿ ಆದೇಶಗಳನ್ನು ಹೊರಡಿಸುವುದು ಖಂಡಿಸಿದ ಮುಖ್ಯಸ್ಥರು, ಶಿಕ್ಷಣ ಸಚಿವರು ಉತ್ತರ ಕರ್ನಾಟಕದ ಶಿಕ್ಷಣ ಸಂಸ್ಥೆಗಳ ಬಗ್ಗೆ ಅಧ್ಯಯನ ಮಾಡಲಿ ಎಂದು ಸಲಹೆ ನೀಡಿದರು.
ಸರ್ಕಾರ ತಕ್ಷಣವೇ ಸಮಗ್ರ ಶಿಕ್ಷಣ ನೀತಿ ರೂಪಿಸಬೇಕು ಎಂದು ಒತ್ತಾಯಿಸಿ ಅಪರ ಆಯುಕ್ತರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ನೂರಾರು ಖಾಸಗಿ ಶಾಲೆಗಳ ಮುಖ್ಯಸ್ಥರು ಇದ್ದರು.
Kshetra Samachara
02/12/2020 01:08 pm