ಧಾರವಾಡ: ಧಾರವಾಡ ಪ್ರಾದೇಶಿಕ ಅರಣ್ಯ ವಿಭಾಗವು ನವಲೂರು ಗ್ರಾಮ ವ್ಯಾಪ್ತಿಯ ಅರಣ್ಯ ಇಲಾಖೆಯ ಗುಡ್ಡದ ಪ್ರದೇಶದಲ್ಲಿ ಪ್ರಾರಂಭಿಸಿರುವ ಸಾಲು ಮರದ ತಿಮ್ಮಕ್ಕ ನಗರವನ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.
ಮೇಯರ್ ಈರೇಶ ಅಂಚಟಗೇರಿ ನಗರವನದಲ್ಲಿ ಸಸಿ ನೆಡುವ ಮೂಲಕ ಕೇಂದ್ರ ಪುರಸ್ಕೃತ ಸಾಲು ಮರದ ತಿಮ್ಮಕ್ಕ ನಗರವನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿದ ಅವರು, ಮಹಾನಗರ ವ್ಯಾಪ್ತಿಯ ಸುಮಾರು ನೂರಕ್ಕೂ ಹೆಚ್ಚು ಉದ್ಯಾನವನಗಳಲ್ಲಿ ಅರಣ್ಯೀಕರಣಗೊಳಿಸಲು ಉದ್ದೇಶಿಸಲಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಹೂವು, ಹಣ್ಣು ಮತ್ತು ಹಸಿರೆಲೆಗಳನ್ನು ಹೆಚ್ಚು ನೀಡುವ ಸಸಿಗಳನ್ನು ನಮ್ಮ ಉದ್ಯಾನವನಗಳಲ್ಲಿ ನೆಡಬೇಕು. ಇದರಿಂದ ಉದ್ಯಾನವನಗಳ ಒತ್ತುವರಿಯನ್ನು ತಪ್ಪಿಸಬಹುದು ಮತ್ತು ನಗರ ಸೌಂದರ್ಯಿಕರಣಕ್ಕೆ ಅನುಕೂಲವಾಗುತ್ತದೆ ಎಂದರು.
ಧಾರವಾಡ ವಿಭಾಗದ ಉಪಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಷ್ಟಿ ಅವರು ಮಾತನಾಡಿ, ಭಾರತ ಸರ್ಕಾರವು ನಗರವನ ಯೋಜನೆಯಡಿ ನಗರ ಪ್ರದೇಶದಲ್ಲಿ ವನ ವೃದ್ಧಿಸಲು ಅನುದಾನ ನೀಡುತ್ತಿದೆ. ನಗರವನ ಯೋಜನೆಗೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ದೇಶದ 75 ನಗರಗಳಲ್ಲಿ ನಗರವನ ಯೋಜನೆಗೆ ಚಾಲನೆ ನೀಡುತ್ತಿದ್ದಾರೆ. ಕರ್ನಾಟಕ ರಾಜ್ಯದ ಧಾರವಾಡ, ತುಮಕೂರು ಮತ್ತು ಬೆಂಗಳೂರಿನಲ್ಲಿ ನಗರವನ ಯೋಜನೆಗೆ ಇಂದು ಚಾಲನೆ ನೀಡಲಾಗುತ್ತಿದೆ ಎಂದರು.
Kshetra Samachara
08/07/2022 02:44 pm