ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ
ಧಾರವಾಡ: ಕೊರೊನಾ ಆರ್ಭಟದಿಂದಾಗಿ ಕಳೆದ ಕೆಲ ವರ್ಷಗಳಿಂದ ಕಳೆಗುಂದಿದ್ದ ಸಾಹಿತ್ಯ ಚಟುವಟಿಕೆಗಳು ಮತ್ತೆ ಗರಿಗೆದರಿವೆ. ಅದರಲ್ಲೂ ಧಾರವಾಡ ಸಾಹಿತ್ಯ ಜಾತ್ರೆಗೆ ಸಜ್ಜುಗೊಳ್ಳುತ್ತಿದೆ.
ಈ ವರ್ಷ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ಧೂರಿಯಾಗಿ ನಡೆಸಲು ತಯಾರಿ ನಡೆಸಲಾಗುತ್ತಿದೆ. ಈಗಾಗಲೇ ಭರದ ಸಿದ್ಧತೆ ಕೂಡ ನಡೆಯುತ್ತಿದೆ.
ಕಳೆದ ಮೂರು, ನಾಲ್ಕು ವರ್ಷಗಳಿಂದ ಸಮ್ಮೇಳನದಲ್ಲಿ ಮೆರವಣಿಗೆ ನಡೆಸಿಕೊಂಡು ಬಂದಿರಲಿಲ್ಲ. ಆದರೆ, ಈ ವರ್ಷ ಕನ್ನಡಾಂಬೆಯ ಭಾವಚಿತ್ರ ಹಾಗೂ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆ ನಡೆಯಲಿದೆ. 14ನೇ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಮಾ.26 ಮತ್ತು 27 ರಂದು ನಡೆಯಲಿದ್ದು, ಈ ಸಮ್ಮೇಳನಕ್ಕೆ ಡಾ.ರಮಾಕಾಂತ ಜೋಶಿ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. 26 ರಂದು ಧಾರವಾಡದ ಕೆಸಿಸಿ ಬ್ಯಾಂಕ್ ಸರ್ಕಲ್‌ನಿಂದ ಸರ್ವಾಧ್ಯಕ್ಷರ ಮತ್ತು ಕನ್ನಡಾಂಬೆಯ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಲಿದೆ. ಸಮ್ಮೇಳನದ ಬಗ್ಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ಪಬ್ಲಿಕ್ ನೆಕ್ಸ್ಟ್‌ಗೆ ಮಾಹಿತಿ ನೀಡಿದ್ದಾರೆ.
ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಐದು ಲಕ್ಷ ರೂಪಾಯಿ ಅನುದಾನ ಬಂದಿದೆ. ಈ ಅನುದಾನದಲ್ಲೇ ಅಚ್ಚುಕಟ್ಟಾಗಿ ಸಮ್ಮೇಳನ ಆಯೋಜನೆ ಮಾಡುವುದು ಆಯೋಜಕರಿಗೆ ಬಹುದೊಡ್ಡ ಜವಾಬ್ದಾರಿಯಾಗಿದೆ. ಯುವಕರು ಸಾಹಿತ್ಯ ಚಟುವಟಿಕೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳುತ್ತಿಲ್ಲ. ಹೀಗಾಗಿ ಈ ವರ್ಷ ಸಾಹಿತ್ಯ ಸಮ್ಮೇಳನದಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಏನೇ ಆಗಲಿ ಕೊರೊನಾ ನಂತರ ಎಲ್ಲಾ ಸಾಹಿತಿಗಳು ಒಂದೆಡೆ ಸೇರುವ ಅವಕಾಶ ಬಂದಿದೆ. ಇದರಿಂದ ಧಾರವಾಡ ಸಾಹಿತ್ಯ ಲೋಕದಲ್ಲಿ ಮತ್ತಷ್ಟು ಹೊಸ ಹೊಸ ಚಟುವಟಿಕೆಗಳು ಗರಿಗೆದರುವಂತಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.
Kshetra Samachara
24/03/2022 06:03 pm