ಹುಬ್ಬಳ್ಳಿ : ಮಕ್ಕಳ ವ್ಯಕ್ತಿತ್ವ ವಿಕಸನಗೊಳ್ಳಲು ಅಭಿನಯ ತರಬೇತಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಬಾಲ ವಿಕಾಸ ಅಕ್ಯಾಡೆಮಿ ಅಧ್ಯಕ್ಷ ಈರಣ್ಣ ಜಡಿ ಅವರು ಅಭಿಪ್ರಾಯ ಪಟ್ಟರು.
ಶನಿವಾರ ಅಮರಗೋಳ ಗ್ರಾಮದ ಸರಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಆರಂಭವಾದ ಸುನಿಧಿ ಕಲಾ ಸೌರಭ ಸಂಸ್ಥೆ ಆಯೋಜಿಸಿರುವ ಎರಡು ದಿನಗಳ ಅಭಿನಯ ತರಬೇತಿ ಕಾರ್ಯಾಗಾರ ರಂಗ ಸಂಭ್ರಮ ವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳು ಇಂತಹ ತರಬೇತಿಯಲ್ಲಿ ಭಾಗವಹಿಸಬೇಕು ಎಂದ ಅವರು ತಮ್ಮ ಬಾಲ್ಯದ ದಿನಗಳನ್ನು ನೆನೆದು ಭಾವುಕರಾದರು.
ಮುಖ್ಯ ಅತಿಥಿಗಳಾಗಿದ್ದ ಚಿಕ್ಕ ಮಕ್ಕಳ ತಜ್ಞ ಡಾ: ಗೋಪಾಲಕೃಷ್ಣ ಮಿತ್ರ ಅವರು ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿರುವ ಮಕ್ಕಳು ಜೀವನದಲ್ಲಿ ಮಹತ್ವದ ಸ್ಥಾನಕ್ಕೆ ಏರಬಲ್ಲರು ಎಂದರಲ್ಲದೆ ಆರೋಗ್ಯದ ಬಗ್ಗೆ ಸಾಕಷ್ಟು ಗಮನ ಹರಿಸಬೇಕು, ಬೇಕರಿ ತಿನಿಸುಗಳಿಂದ ದೂರ ಇರಬೇಕು ಎಂದು ಹೇಳಿ, ಸುನಿಧಿ ಕಲಾ ಸೌರಭ ಕೈಕೊಂಡ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಸುಭಾಸ ನರೇಂದ್ರ ಮಾತನಾಡಿ ಮಕ್ಕಳ ಭವಿಷ್ಯಕ್ಕೆ ಇಂತಹ ಕಾರ್ಯಾಗಾರದ ಮಹತ್ವವನ್ನು ವಿಶ್ಲೇಷಿಸಿ, ಮಕ್ಕಳಿಗೆ ಉತ್ತಮ ಸಾಧನೆ ಮಾಡಲು ಅನುಕೂಲವಾಗಲು ಸಹಕಾರ ನೀಡುತ್ತಿರುವ ಪ್ರಭಾರಿ ಮುಖ್ಯ ಶಿಕ್ಷಕ ಬಮ್ಮನವಾಡಿ ಅವರು ಹಾಗೂ ಎಲ್ಲ ಸಹ ಶಿಕ್ಷಕರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.ವೇದಿಕೆಯಲ್ಲಿ ಪಬ್ಲಿಕ್ ನೆಕ್ಸ್ಟ್ ಮಾಧ್ಯಮ ಸಲಹೆಗಾರ ಕೇಶವ ನಾಡಕರ್ಣಿ, ಎಲ್ ಆರ್ ಕೋಲಾಚಲ ಉಪಸ್ಥಿತರಿದ್ದರು.
ಶ್ರೀಮತಿ ವೀಣಾ ಅಠವಲೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ,ಕಾರ್ಯಕ್ರಮ ನಿರೂಪಿಸಿದರು.ಶ್ರೀಮತಿ ಪದ್ಮಪ್ರಿಯ ಚಿಲ್ಲಾಪುರ ಅವರ ಸ್ವಾಗತ ಗೀತೆ , ಹಾಗೂ ಶ್ರೀ ಬಿ ಬಿ ಸುಳ್ಳದ ವಂದಿಸಿದರು.
Kshetra Samachara
27/02/2021 05:22 pm