ಧಾರವಾಡ: ಕೊರೊನಾ ಮೂರನೇ ಅಲೆ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ಧಾರವಾಡದ ಪ್ರಸಿದ್ಧ ಮುರುಘಾಮಠದ ಶ್ರೀ ಮುರುಘೇಂದ್ರ ಮಹಾಶಿವಯೋಗಿಗಳ ರಥೋತ್ಸವ ಬೆಳ್ಳಂಬೆಳಿಗ್ಗೆಯೇ ಸರಳವಾಗಿ ಎಳೆಯಲ್ಪಟ್ಟಿದೆ.
ಅನ್ನದಾಸೋಹ, ಅಕ್ಷರ ದಾಸೋಹದ ಮೂಲಕ ಧಾರವಾಡದ ಮುರುಘಾಮಠ ಪ್ರಸಿದ್ಧಿ ಪಡೆದಿದೆ. ಪ್ರತಿವರ್ಷ ತಿಂಗಳಾನುಗಟ್ಟಲೆ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅದ್ಧೂರಿಯಾಗಿ ರಥೋತ್ಸವ ಮಾಡಲಾಗುತ್ತಿತ್ತು.
ಆದರೆ, ಪ್ರಸಕ್ತ ವರ್ಷ ಕೊರೊನಾ ಮೂರನೇ ಅಲೆ ಹಿನ್ನೆಲೆಯಲ್ಲಿ ರಥೋತ್ಸವವನ್ನು ಬೆಳ್ಳಂಬೆಳಿಗ್ಗೆಯೇ ಸಾವಿರಾರು ಭಕ್ತಾದಿಗಳ ಮಧ್ಯೆ ಸರಳವಾಗಿ ಎಳೆದು ಸಂಪ್ರದಾಯದಂತೆ ಜಾತ್ರಾ ಮಹೋತ್ಸವ ಆಚರಿಸಲಾಯಿತು.
ಬೆಳಿಗ್ಗೆಯೇ ತೇರನ್ನು ಎಳೆಯಲಾಗುತ್ತದೆ ಎಂದು ಅರಿತಿದ್ದ ಭಕ್ತಾಧಿಗಳು ದೇವಸ್ಥಾನದ ಆವರಣದಲ್ಲಿ ಜಮಾಯಿಸಿದ್ದರು. ಭಕ್ತರ ಹರ್ಷೋದ್ಘಾರಗಳ ಮಧ್ಯೆ ತೇರನ್ನು ಎಳೆಯಲಾಯಿತು. ಭಕ್ತರು ತೇರಿಗೆ ಉತ್ತುತ್ತಿ, ಬಾಳೆಹಣ್ಣು, ನಿಂಬೆಹಣ್ಣುಗಳನ್ನು ತೂರಿ ಮುರುಘೇಂದ್ರ ಮಹಾಶಿವಯೋಗಿಗಳ ಕೃಪೆಗೆ ಪಾತ್ರರಾದರು. ಮುನ್ನೆಚ್ಚರಿಕಾ ಕ್ರಮವಾಗಿ ಮಠದ ಆವರಣದಲ್ಲಿ ಪೊಲೀಸ್ ಬಂದೋಬಸ್ತ್ ಸಹ ಮಾಡಲಾಗಿತ್ತು.
Kshetra Samachara
05/02/2022 11:37 am