ಕುಂದಗೋಳ : ಕಲೆ ಎಂಬುದು ಯಾರಿಗೆ ? ಯಾವಾಗ ? ಯಾವ ಗೌರವ ತಂದು ಕೊಡುತ್ತೋ ಗೊತ್ತಿಲ್ಲ ಬಿಡಿ. ಅಂತಹ ಕಲೆಯನ್ನು 55 ವರ್ಷ ಉಳಿಸಿ ಬೆಳೆಸಿ ಕರ್ನಾಟಕದ್ಯಾದ್ಯಂತ ಕಾರ್ಯಕ್ರಮ ನೀಡಿದ ಇಲ್ಲೋಬ್ಬ ಕಲಾವಿದನಿಗೆ ಈ ವರ್ಷ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ.
ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯ ಅಗ್ರ ಗಣ್ಯರ ಸಾಲಿನಲ್ಲಿ ತಾವೂಬ್ಬರಾಗಿ ಪ್ರಶಸ್ತಿಗೆ ಭಾಜನರಾದವರೇ ಕುಂದಗೋಳ ಮತಕ್ಷೇತ್ರದ ಶರೇವಾಡ ಗ್ರಾಮದ ಶಹನಾಯಿ ವಾದಕ ವೆಂಕಪ್ಪ ಗೋವಿಂದಪ್ಪ ಭಜಂತ್ರಿ. ಇವರು ಓದಿದ್ದು ಕೇವಲ 3 ನೇ ತರಗತಿ ಪಡೆದಿದ್ದು ಮಾತ್ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ. ಇವರ ಸಾಧನೆಗೆ ವರವಾದದ್ದೇ ಈ ಶಹನಾಯಿ.
ವೆಂಕಪ್ಪ ಭಜಂತ್ರಿ ತಮ್ಮ 15ನೇ ವಯಸ್ಸಿನಲ್ಲಿ ಶಾಲೆ ಬಿಟ್ಟು, ಬದುಕಿಗಾಗಿ ವಿವಿಧ ಕಲೆಯನ್ನು ಅರಸುತ್ತಾ ಹೋದಾಗ ಕೊನೆಗೆ ಶಹನಾಯಿ ವಾದನದಲ್ಲೇ ನಿಸ್ಸಿಮರಾದವರು, ಕುಂದಗೋಳ ತಾಲೂಕ ಅಷ್ಟೇ ಅಲ್ಲದೇ ಕರ್ನಾಟಕದಾದ್ಯಂತ ಕಾರ್ಯಕ್ರಮ ನೀಡಿದ ಇವರು ಶರೇವಾಡದ ಕರಡಿ ಮಜಲಿನ ತಂಡದಲ್ಲಿ ಪ್ರಮುಖನಾಗಿ ಉಸಿರು ತುಂಬಿ ಊದುವ ಶಹನಾಯಿಯಲ್ಲೇ ಪ್ರಾಮುಖ್ಯತೆ ಗಳಿಸಿ, ಶಹನಾಯಿ ಮಾತ್ರವಲ್ಲದೆ ಇಂದಿಗೂ ತಮ್ಮ 68 ರ ಇಳಿವಯಸ್ಸಿನಲ್ಲಿ ಹಲಗಿ, ಡೋಲು, ಶೃತಿ ಹಾಕುವುದು, ಹಾರ್ಮೋನಿಯಂ ಬಾರಿಸುವುದರ ಜೊತೆಗೆ ಬಾಯಿಂದ ಶಹನಾಯಿಯಲ್ಲಿ ರಾಗ ಹೊರಡಿಸುತ್ತಾರೆ.
ತಮ್ಮ 55 ವರ್ಷಗಳ ಶಹನಾಯಿ ವಾದನದ ಕಲೆಯಲ್ಲಿ ಕರಡಿ ಮಜಲಿನ ಜೊತೆ ಜೊತೆಗೆ ದೊಡ್ಡಾಟ, ಸಣ್ಣಾಟ ಕೋಲಾಟ ಸೇರಿ ಆಕಾಶವಾಣಿಯಲ್ಲಿ ವೆಂಕಪ್ಪ ಭಜಂತ್ರಿ ಕಾರ್ಯಕ್ರಮ ನೀಡಿ ಮೈಸೂರು ದಸರಾ, ಮಂಗಳೂರಿನ ದಸರಾ ಕುದ್ರೋಳಿ ಉತ್ಸವದಲ್ಲೂ ಭಾಗಿಯಾಗಿದ್ದಲ್ಲದೇ ಉತ್ತರ ಕರ್ನಾಟಕದ ಜಾನಪದ ಕಲೆ ಹೆಜ್ಜೆ ಮೇಳವನ್ನು ಶಹನಾಯಿ ವಾದನ ಮೂಲಕ ಶ್ರೀಮಂತಗೊಳಿಸಿ, ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಕೊರೊಳೊಡ್ಡಿದ್ದಾರೆ.
ಸದಾ ಕ್ರೀಯಾಶೀಲರಾಗಿರುವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೆಂಕಪ್ಪ ಭಜಂತ್ರಿ ಈಗಾಗಲೇ ಅದೆಷ್ಟೋ ಸನ್ಮಾನ, ಗೌರವಕ್ಕೆ ಪಾತ್ರರಾಗಿ ಯಾರಾದರೂ ಶಹನಾಯಿ ವಾದನ ಮಾಡುವುದರಲ್ಲಿ ಆಸಕ್ತಿ ಇದ್ದರೇ ಕಲಿಸುವ ವಿಶ್ವಾಸ ತೋರಿ ಮತ್ತೋಮ್ಮೆ ಕಲಾ ಪ್ರೇಮ ಮೆರೆದಿದ್ದಾರೆ.
ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್ ಕುಂದಗೋಳ
Kshetra Samachara
10/11/2021 08:45 am