ಧಾರವಾಡ: ವೈದ್ಯಕೀಯ ಕ್ಷೇತ್ರದಲ್ಲಿ ಹಣ ಗಳಿಕೆಗಿಂತ ಸೇವಾ ಮನೋಭಾವ ಮುಖ್ಯ. ಹೀಗಾಗಿ ಪದವಿ ಪಡೆದ ವಿದ್ಯಾರ್ಥಿಗಳು ಸೇವಾ ಮನೋಭಾವ ಬೆಳೆಸಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಹಾಗೂ ಎಸ್‌ಡಿಎಂ ವಿವಿ ಕುಲಪತಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ನಗರದ ಡಿ. ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಧರ್ಮಸ್ಥಳ ಮಂಜುನಾಥೇಶ್ವರ ದಂತ ವಿಜ್ಞಾನ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ 30ನೇ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಿಕ್ಷಣ ಪಡೆದ ಬಳಿಕ ಸಿಗುವ ಅನುಭವದಿಂದಲೇ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯ. ಯಾವುದೇ ಕ್ಷೇತ್ರದಲ್ಲಿ ಗುಣಮಟ್ಟ ಹೆಚ್ಚಿದಂತೆ ಜವಾಬ್ದಾರಿಯೂ ಹೆಚ್ಚುತ್ತದೆ. ಉತ್ತಮ ಶಿಕ್ಷಣ ಸಿಕ್ಕರೆ ಇಡೀ ಜಗತ್ತು ಗೆಲ್ಲಬಹುದು ಎಂಬ ಮಾತಿದೆ. ಅದರಂತೆ ಪದವಿ ಪಡೆದ ವಿದ್ಯಾರ್ಥಿಗಳು ಮುನ್ನಡೆಯಬೇಕು. ಸೇವಾ ಅವಧಿಯಲ್ಲಿ ಶಿಕ್ಷಣ ಪಡೆದ ಸಂಸ್ಥೆ ಹಾಗೂ ಪಾಲಕರಿಗೆ ಉತ್ತಮ ಹೆಸರು ತರುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಜೀನವದಲ್ಲಿ ಯಶಸ್ಸಿಗಿಂತ ಆತ್ಮತೃಪ್ತಿ ಮುಖ್ಯ ಎಂಬುದನ್ನು ತಿಳಿಯಬೇಕು. ಜೀವನದ ಅಂತಿಮ ಕ್ಷಣದವರೆಗೂ ದುಡಿಯುವ ಅವಕಾಶವಿರುವುದು ವೈದ್ಯಕೀಯ ಕ್ಷೇತ್ರದಲ್ಲಿ ಮಾತ್ರ. ಹೀಗಾಗಿ ರೋಗಿಗಳನ್ನು ಪ್ರೀತಿಯಿಂದ ಆರೈಕೆ ಮಾಡಿ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಪದವಿ ಹಾಗೂ ಸ್ನಾತಕೋತ್ತರ ಸೇರಿ ಒಟ್ಟು 139 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಪದವಿ ವಿಭಾಗದಲ್ಲಿ ಡಾ. ಆಕಾಂಕ್ಷಾ ಸಿಂಗ್ ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ಡಾ. ಸೌರವ ಬಹಾದ್ಧೂರಿ ಚಿನ್ನದ ಪದಕ ಪಡೆದಿದ್ದಾರೆ. ಉಪ ಕುಲಪತಿ ಡಾ. ನಿರಂಜನಕುಮಾರ, ದಂತ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಬಲರಾಮ ನಾಯಕ, ಎಸ್‌ಡಿಎಂಇ ಸೊಸೈಟಿ ಕಾರ್ಯದರ್ಶಿ ವಿ. ಜೀವಂಧರಕುಮಾರ, ಆಡಳಿತ ನಿರ್ದೇಶಕ ಸಾಕೇತ ಶೆಟ್ಟಿ, ಡಾ. ರತ್ನ ಮಾಲಾ ದೇಸಾಯಿ, ಪದ್ಮಲತಾ ನಿರಂಜನಕುಮಾರ, ಯು.ಎಸ್. ದಿನೇಶ, ಇತರರು ಇದ್ದರು.
Kshetra Samachara
25/02/2021 10:39 pm