ಹುಬ್ಬಳ್ಳಿ : ಅವರೆಲ್ಲರೂ ಫೈನಾನ್ಸ್ ಕಂಪನಿಯೊಂದರ ಬೆಳವಣಿಗೆಗೆ ಶ್ರಮಿಸಿದವರು. ಗಲ್ಲಿ ಗಲ್ಲಿಯಲ್ಲಿ ಓಡಾಡಿ ಜಾಹೀರಾತು ಮಾಡಿದವರು. ಆಟೋ, ಗೋಡೆ ಹೀಗೆ ಕಂಡ ಕಂಡಲ್ಲಿ ಜಾಹೀರಾತು ಬಿತ್ತರಿಸುವ ಮೂಲಕ ಪ್ರಚಾರಕ್ಕೆ ಸಾಕಷ್ಟು ಶ್ರಮಿಸಿದವರು. ಈಗ ಏಕಾಏಕಿ ಹೋರಾಟಕ್ಕೆ ಮುಂದಾಗಿದ್ದಾರೆ. ಅಷ್ಟಕ್ಕೂ ಅಲ್ಲಿ ಆಗಿದ್ದಾದರೂ ಏನು ಅಂತೀರಾ ಈ ಸ್ಟೋರಿ ನೋಡಿ..
ಹೀಗೆ ಕೈಯಲ್ಲಿ ಹಲವಾರು ದಾಖಲೆಗಳನ್ನು ಹಿಡಿದುಕೊಂಡು ಮಣಪ್ಪುರಂ ಫೈನಾನ್ಸ್ ವಿರುದ್ಧ ಆಕ್ರೋಶ ಹೊರಹಾಕುತ್ತಿರುವ ಸಿಬ್ಬಂದಿ. ಸುಮಾರು ವರ್ಷಗಳಿಂದ ವೇತನವೇ ಬಂದಿಲ್ಲ ಎಂದು ನೋವಿನಲ್ಲಿಯೇ ಹೋರಾಟಕ್ಕೆ ಇಳಿದ ಜಾಹೀರಾತು ಸಿಬ್ಬಂದಿ. ಇದೆಲ್ಲದಕ್ಕೂ ಸಾಕ್ಷಿಯಾಗಿದ್ದು, ಹುಬ್ಬಳ್ಳಿಯ ಹೊಸೂರಿನಲ್ಲಿರುವ ಮಣಪ್ಪುರಂ ಫೈನಾನ್ಸ್ ಶಾಖೆ.
ಹೌದು. ಸುಮಾರು ವರ್ಷಗಳಿಂದ ಮಣಪ್ಪುರಂ ಫೈನಾನ್ಸ್ ನಲ್ಲಿ ಜಾಹೀರಾತು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇವೆ. ಬಿಸಿಲು, ಮಳೆ,ಗಾಳಿ ಲೆಕ್ಕಿಸದೆ ಶ್ರಮಿಸಿದ್ದೇವೆ. ಆದರೆ ಇದುವರೆಗೂ ನಮಗೆ ಬರಬೇಕಾದ ವೇತನ ಹಾಗೂ ಪ್ರೋತ್ಸಾಹ ಧನ ಕೈ ಸೇರಿಲ್ಲ ಎಂದು ಆಕ್ರೋಶಗೊಂಡ ಜಾಹೀರಾತು ವಿಭಾಗದ ಸಿಬ್ಬಂದಿ ಫೈನಾನ್ಸ್ ಶಾಖೆಯ ಬಾಗಿಲು ಮುಚ್ಚಿ ಪ್ರತಿಭಟನೆ ನಡೆಸಿದ್ದಾರೆ.
ಇನ್ನೂ ಸುಮಾರು ಮೂವತ್ತು ಹೆಚ್ಚು ಸಿಬ್ಬಂದಿ ಕೆಲಸ ನಿರ್ವಹಿಸಿದ್ದು, ಹುಬ್ಬಳ್ಳಿ ಶಹರ, ಹುಬ್ಬಳ್ಳಿ ಗ್ರಾಮೀಣ ಭಾಗ ಹೀಗೆ ಹಲವಾರು ಕಡೆಯಲ್ಲಿ ಓಡಾಡಿ ಫೈನಾನ್ಸ್ ಕಂಪನಿಯ ಪ್ರಚಾರಕ್ಕೆ ಶ್ರಮಿಸಿದ್ದಾರೆ. ಆದರೆ ಅವರು ಮಾಡಿದ ಕೆಲಸಕ್ಕೆ ಮಾತ್ರ ಯಾವುದೇ ವೇತನ ದೊರೆತಿಲ್ಲ. ಈ ಬಗ್ಗೆ ಸುಮಾರು ಸಾರಿ ಮನವಿ ಮಾಡಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ ಕೂಡಲೇ ನಮ್ಮ ವೇತನ ನಮಗೆ ಕೊಡಿಸಿ ಎಂದು ಮಾಧ್ಯಮದ ಮುಂದೆ ಕಣ್ಣೀರು ಹಾಕುತ್ತಿದ್ದಾರೆ.
ಒಟ್ಟಿನಲ್ಲಿ ನಮ್ಮ ಶ್ರಮದ ಫಲ ನಮಗೆ ಕೊಡಿ ಎಂದು ತಮ್ಮ ಕುಟುಂಬದ ನೋವನ್ನು ಈ ಜಾಹೀರಾತು ಸಿಬ್ಬಂದಿ ತೋಡಿಕೊಂಡಿದ್ದು, ಈ ಕುರಿತು ಶಾಖೆಯ ಮುಖ್ಯಸ್ಥರು ಮುತುವರ್ಜಿಯಿಂದ ಇವರ ಕಷ್ಟಕ್ಕೆ ಸ್ಪಂದಿಸುವ ಕಾರ್ಯವನ್ನು ಮಾಡಬೇಕಿದೆ.
Kshetra Samachara
24/09/2022 05:27 pm