ಹುಬ್ಬಳ್ಳಿ: ನೀವು ಖಾಸಗಿ ಫೈನಾನ್ಸ್ ನಲ್ಲಿ ಲೋನ್ ಪಡೆದಿದ್ದಿರಾ ? ಹಾಗಿದ್ರೆ ಖಂಡಿತಾ ನೀವು ಈ ಸುದ್ದಿ ನೋಡಲೇ ಬೇಕು! ರೈತರ ಅಮಾಯಕತೆಯನ್ನು ಬಳಸಿಕೊಂಡು, ಲೋನ್ ಪಡೆಯದಿದ್ದರೂ ರೈತನಿಗೆ ಲಕ್ಷ ಲಕ್ಷ ಸಾಲದ ಶೂಲ ಹೊರಿಸಿರುವ ಖಾಸಗಿ ಫೈನಾನ್ಸ್ ಕಳ್ಳಾಟದ ಸ್ಟೋರಿ ಇದು...
ಹೌದು... ಇಡೀ ಮಾನವ ಕುಲಕ್ಕಾಗಿ ಅನ್ನ ಬೆಳೆಯುವ ರೈತನ ಅನ್ನಕ್ಕೇ ಖಾಸಗಿ ಫೈನಾನ್ಸ್ ಕಂಪನಿಯೊಂದು ಕನ್ನಹಾಕಿ, ಅಮಾಯಕ ರೈತನಿಗೆ ಕೋರ್ಟ್ ಕಟಕಟೆ ಹತ್ತುವಂತೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹೀಗೆ ರೈತರೆಲ್ಲಾ ಸೇರಿಕೊಂಡು ಫೈನಾನ್ಸ್ ಕಚೇರಿ ಮುಂದೆ ಕುಳಿತು ಪ್ರತಿಭಟನೆ ಮಾಡುತ್ತಿರುವ ದೃಶ್ಯ ಕಂಡು ಬಂದಿದ್ದು, ಹುಬ್ಬಳ್ಳಿಯ ಪಿಂಟೋ ರಸ್ತೆಯಲ್ಲಿರುವ ಪೂನಾವಾಲ ಫೈನಾನ್ಸ್‌ನಲ್ಲಿ. ಅಷ್ಟಕ್ಕೂ ರೈತರ ಈ ಧರಣಿಯ ಹಿಂದೆ ಫೈನಾನ್ಸ್ ಕಂಪನಿಯ ಕಳ್ಳಾಟವಿದೆ.
ಸಿಂದಗಿಯ ರೈತ ಸಿದ್ದಪ್ಪ ಪಡಶೆಟ್ಟಿ ಎನ್ನುವವರು ಈ ಪೂನಾವಾಲ ಫೈನಾನ್ಸ್‌ನಲ್ಲಿ 2015 ರಲ್ಲಿ ಟ್ರಾಕ್ಟರ್‌ಗಾಗಿ 5 ಲಕ್ಷ ರೂ. ಲೋನ್ ತೆಗೆದುಕೊಂಡಿದ್ದರು. ಕಂತುಗಳಲ್ಲಿ ಲೋನನ್ನು ಕೂಡ ರೈತ ಸಿದ್ದಪ್ಪ ಕ್ಲಿಯರ್ ಮಾಡಿದ್ದಾರೆ.
ಆದ್ರೆ ಅಸಲಿ ವಿಷಯನೇ ಬೇರೆ ಇದೆ. ಫೈನಾನ್ಸ್ ಕಂಪನಿ ಈ ರೈತನಿಗೆ ನೀವು ಮತ್ತೇ ಲೋನ್ ತೆಗೆದುಕೊಳ್ಳಿ ಎಂದು ಒತ್ತಾಯಿಸಿದ್ದಾರೆ. ಸಿದ್ದಪ್ಪನಿಗೆ ಲೋನ್ ಅವಶ್ಯಕತೆ ಇಲ್ಲದಿರುವುದರಿಂದ ಬೇಡವೆಂದು ತಿರಸ್ಕಾರ ಮಾಡಿದ್ದಾರೆ. ಹೀಗಿದ್ದರೂ ಫೈನಾನ್ಸ್ ಕಂಪನಿ ಸಿದ್ದಪ್ಪನಿಗೆ ತಿಳಿಯದಂತೆ 75 ಸಾವಿರ ರೂ.ವನ್ನು ಆತನ ಸಾಲದ 2019ರಲ್ಲಿ ಖಾತೆಗೆ ಮರು ಜಮಾ ಮಾಡಿದೆ. ಈ ವಿಚಾರ ರೈತನಿಗೆ ತಿಳಿಯುತ್ತಿದ್ದಂತೆ, ಸಮಸ್ಯೆಯನ್ನು ಸರಿ ಮಾಡಿರುವುದಾಗಿ ಸಿಬ್ಬಂದಿ ನಾಟಕವಾಡಿದ್ದಾರೆ. ಇದಾದ ನಾಲ್ಕು ವರ್ಷಗಳಾದ ಮೇಲೆ ಏಕಾಏಕಿ ಫೈನಾನ್ಸ್ ಸಿದ್ದಪ್ಪನಿಗೆ ಐದು ಲಕ್ಷ ಲೋನ್ ತುಂಬುವಂತೆ ಕೋರ್ಟ್ ನೋಟಿಸ್ ನೀಡಿದ್ದು, ಇದರಿಂದಾಗಿ ಸಿದ್ದಪ್ಪನಿಗೆ ಆಕಾಶವೇ ಕಳಚಿ ಬಿದ್ದಂತಾಗಿದೆ.
ಇನ್ನು ರೈತ ಸಿದ್ದಪ್ಪನ ಪರಿಸ್ಥಿತಿ ನೋಡಿದ ರೈತ ಸಂಘಟನೆ ಈಗ ಫೈನಾನ್ಸ್ ಕಚೇರಿ ಮುಂದೆ ಧರಣಿಗೆ ಮುಂದಾಗಿದೆ. ರೈತರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತ ಫೈನಾನ್ಸ್ ತನ್ನ ತಪ್ಪು ಒಪ್ಪಿಕೊಂಡಿದೆ. ಆದ್ರೆ ತನ್ನ ಭಂಡತನವನ್ನು ಮತ್ತೆ ಪ್ರದರ್ಶನ ಮಾಡುತ್ತಿದ್ದು, ಈ ತಿಂಗಳ 26 ರಂದು ನಡೆಯುವ ಕೋರ್ಟ್ ವಿಚಾರಣೆಯಲ್ಲಿ ಕೇಸ್ ಹಿಂಪಡೆಯುವ ಭರವಸೆ ನೀಡಿದೆ. ಆದರೆ ಕಂಪನಿಯ ಈ ನಾಟಕವನ್ನು ಒಪ್ಪದ ರೈತರು ಈ ಕೂಡಲೇ ಕೇಸ್ ವಾಪಸು ಪಡೆಯಬೇಕೆಂದು ಧರಣಿ ಮುಂದುವರಿಸಿದೆ.
ಒಟ್ಟಿನಲ್ಲಿ ಇನ್ಮುಂದೆಯಾದ್ರು ರೈತರು ಖಾಸಗಿ ಫೈನಾನ್ಸ್ ನಲ್ಲಿ ಸಾಲ ಪಡೆಯಬೇಕಾದ್ರೆ ಎಲ್ಲವನ್ನು ವಿಚಾರಿಸಿ ದಾಖಲೆ ಸಮೇತ ಪಡೆಯಿರಿ. ಕೂಡಲೇ ಈ ರೈತನ ಸಮಸ್ಯೆಯನ್ನು ಸಂಬಂಧಿಸಿದ ಅಧಿಕಾರಿಗಳು ಮತ್ತು ಪೂನಾವಾಲ ಫೈನಾನ್ಸ್ ಸಿಬ್ಬಂದಿ ಬಗೆಹರಿಸಿ ಈ ರೈತನನ್ನು ನೆಮ್ಮದಿಯಾಗಿ ಜೀವಿಸಲು ಬಿಡಿ.
- ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
20/09/2022 08:46 am