ಧಾರವಾಡ: ಭೂಗತ ಪಾತಕಿ ಬಚ್ಚಾಖಾನ್ ತನ್ನ ಪ್ರೇಯಸಿಯೊಂದಿಗೆ ಸರಸ ಸಲ್ಲಾಪದಲ್ಲಿದ್ದಾಗಲೇ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ಪಾತಕಿಗೆ ಸರಸ ಸಲ್ಲಾಪಕ್ಕೆ ಅವಕಾಶ ಮಾಡಿಕೊಟ್ಟಿದ್ದೇ ಪೊಲೀಸರು ಎಂಬುದು ತಲೆತಗ್ಗಿಸುವ ವಿಚಾರ.
ಹೌದು! ವಿಚಾರಣೆಗೆಂದು ಬಳ್ಳಾರಿ ಜೈಲಿನಿಂದ ಬಚ್ಚಾಖಾನ್‌ನನ್ನು ಧಾರವಾಡ ನ್ಯಾಯಾಲಯಕ್ಕೆ ಪೊಲೀಸರು ಭದ್ರತೆ ಮಧ್ಯೆ ಕರೆ ತಂದಿದ್ದರು. ಬಚ್ಚಾಖಾನ್ ಬರುವ ವಿಚಾರ ಆತನ ಪ್ರೇಯಸಿಗೆ ಅದು ಹೇಗೆ ತಿಳಿದಿತ್ತೋ ಗೊತ್ತಿಲ್ಲ. ಆಕೆ ರಾಯಾಪುರ ಬಳಿ ಇರುವ ಪ್ರತಿಷ್ಠಿತ ಲಾಡ್ಜ್ ಒಂದರಲ್ಲಿ ಆತನಿಗಾಗಿ ಕಾಯುತ್ತ ನಿಂತಿದ್ದಳು. ವಿಚಾರಣೆ ಮುಗಿಸಿದ ನಂತರ ಬಳ್ಳಾರಿ ಪೊಲೀಸರೇ ಸ್ವತಃ ಬಚ್ಚಾಖಾನ್‌ನನ್ನು ಆ ಲಾಡ್ಜ್‌ಗೆ ಕರೆದುಕೊಂಡು ಹೋಗಿ ಆತನ ಪ್ರೇಯಸಿಯೊಂದಿಗೆ ಸರಸ ಸಲ್ಲಾಪಕ್ಕೆ ಬಿಟ್ಟು ತಾವು ಹೊರಗಡೆ ಕಾಯುತ್ತ ನಿಂತಿದ್ದಾರೆ. ಈ ವಿಚಾರ ತಿಳಿದ ಹುಬ್ಬಳ್ಳಿ, ಧಾರವಾಡ ಮಹಾನಗರದ ಖಡಕ್ ಪೊಲೀಸ್ ಆಯುಕ್ತ ಲಾಬುರಾಮ್ ಅವರು ವಿದ್ಯಾಗಿರಿ ಠಾಣೆ ಪೊಲೀಸರಿಂದ ರೇಡ್ ನಡೆಸಿದ್ದಾರೆ.
ಅಲ್ಲಿಂದ ನೇರವಾಗಿ ಭೂಗತ ಪಾತಕಿಯನ್ನು ವಿದ್ಯಾಗಿರಿ ಠಾಣೆಗೆ ಕರೆ ತಂದ ಧಾರವಾಡ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ. ಬಚ್ಚಾಖಾನ್ ಬಿಲ್ಡರ್ ಸುಬ್ಬರಾವ್ ಅವರ ಕೊಲೆ ಕೇಸ್‌ನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ.
ಹೀಗಿರುವಾಗ ಆತನಿಗೆ ಬಳ್ಳಾರಿ ಪೊಲೀಸರೇ ರಾಜಾತಿಥ್ಯ ನೀಡಿ ಆತನ ಪ್ರೇಯಸಿಯೊಂದಿಗೆ ಲವ್ವಿಡವ್ವಿ ಆಡಲು ಬಿಟ್ಟು ತಾವು ಮಾತ್ರ ಹೊರಗಡೆ ಕಾಯುತ್ತ ನಿಂತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಕ್ರಮ ಕೈಗೊಂಡ ಖಡಕ್ ಐಪಿಎಸ್ ಅಧಿಕಾರಿ ಲಾಬುರಾಮ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
20/08/2022 10:41 pm