ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಸಕ್ತ ಸಾಲಿನಲ್ಲಿ 14 ಬಾಲ್ಯ ವಿವಾಹಗಳ ತಡೆ: ಬಾಲ್ಯವಿವಾಹ ಮಾಡಿದವರ ವಿರುದ್ಧ 2 ಎಫ್‍ಐಆರ್ ದಾಖಲು

ಧಾರವಾಡ: ಪೊಲೀಸ್ ಇಲಾಖೆ, ಪಂಚಾಯತ್ ರಾಜ್ಯ ಇಲಾಖೆ, ತಾಲೂಕು ಮಟ್ಟದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ನೇತೃತ್ವದಲ್ಲಿ ಪ್ರಸಕ್ತ 2022-2023 ಸಾಲಿನಲ್ಲಿ ಒಟ್ಟು 14 ಬಾಲ್ಯ ವಿವಾಹಗಳನ್ನು ತಡೆಯಲಾಗಿದೆ ಮತ್ತು ಬಾಲ್ಯ ವಿವಾಹ ನಡೆದ ಎರಡು ಪ್ರಕರಣಗಳಲ್ಲಿ, ಬಾಲ್ಯ ವಿವಾಹ ಮಾಡಿದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲು ಮಾಡಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಾ.ಕಮಲಾ ಬೈಲೂರ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, 2021-22 ನೇ ಸಾಲಿನಲ್ಲಿ ಒಟ್ಟು 23 ಬಾಲ್ಯ ವಿವಾಹಗಳನ್ನು ತಡೆದು, ಇದಕ್ಕೆ ಸಂಬಂಧಿಸಿದಂತೆ 10 ಪ್ರಕರಣಗಳಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ ಮತ್ತು ಕಾನೂನು ಬಾಹಿರವಾಗಿ ಬಾಲ್ಯವಿವಾಹ ನಡೆದ 7 ಪ್ರಕರಣಗಳಲ್ಲಿ ದೂರು ದಾಖಲಿಸಲಾಗಿದೆ.

ಬಾಲ್ಯ ವಿವಾಹವು ಒಂದು ಸಾಮಾಜಿಕ ಪಿಡುಗು. ಇದನ್ನು ಹೊಡೆದೋಡಿಸಲು ವಿವಿಧ ಇಲಾಖೆಯ ಸಹಯೋಗದಲ್ಲಿ ಹಲವಾರು ಅರಿವು, ತರಬೇತಿ ಹಾಗೂ ಐಇಸಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ. ಮಕ್ಕಳನ್ನು ಬಾಲ್ಯ ವಿವಾಹಕ್ಕೆ ಯಾರಾದರೂ ಬಳಸಿಕೊಂಡರೆ ಅಂತಹರ ವಿರುದ್ಧ ಕರ್ನಾಟಕ ಬಾಲ್ಯ ವಿವಾಹ ನಿಷೇಧ ಕಾಯ್ದೆ-2006 ಪ್ರಕಾರ ಶಿಕ್ಷಾರ್ಹ ಕ್ರಮಕೈಗೊಂಡು 1 ಲಕ್ಷ ರೂಪಾಯಿ ದಂಡ ಹಾಗೂ ಎರಡು ವರ್ಷ ಜೈಲುವಾಸ ಅಥವಾ ಎರಡನ್ನೂ ವಿಧಿಸಬಹುದಾಗಿದೆ. ಮಕ್ಕಳ ಹಕ್ಕುಗಳನ್ನು ರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಪ್ರತಿ ಮಗುವಿಗೂ ಶಿಕ್ಷಣ ರಕ್ಷಣೆ ಮತ್ತು ಪೋಷಣೆ ಅವಶ್ಯವಾಗಿದೆ ಎಂದು ಅವರು ಹೇಳಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

29/07/2022 03:46 pm

Cinque Terre

34.89 K

Cinque Terre

0

ಸಂಬಂಧಿತ ಸುದ್ದಿ