ಹುಬ್ಬಳ್ಳಿ: ನೂರಾರು ಯುವಕರಿಗೆ ಹಾಗೂ ಯುವತಿಯರಿಗೆ ಉದ್ಯೋಗ ನೀಡಿ ಅವರ ಕುಟುಂಬಗಳಿಗೆ ಆಸರೆಯಾಗಿದ್ದ ವಾಸ್ತು ಶಾಸ್ತ್ರಜ್ಞ ಚಂದ್ರಶೇಖರ ಗುರೂಜಿಯನ್ನು ಕೊಲೆ ಮಾಡಿರುವ ಹಿನ್ನೆಲೆಯಲ್ಲಿ ಸುದ್ದಿ ತಿಳಿಯುತ್ತಿದ್ದಂತೆಯೇ ಹುಬ್ಬಳ್ಳಿಯ ಕಿಮ್ಸ್ ಶವಗಾರಕ್ಕೆ ಸಿಬ್ಬಂದಿ ದಂಡು ಹರಿದು ಬಂದಿದೆ. ಸಂಬಂಧಿಕರ ಹಾಗೂ ಸಿಬ್ಬಂದಿಗಳ ಆಕ್ರಂದನ ಮುಗಿಲು ಮುಟ್ಟಿದೆ.
ಇಂದು ಮಧ್ಯಾಹ್ನ ಖಾಸಗಿ ಹೊಟೇಲ್‌ನಲ್ಲಿ ಕೊಲೆಯಾದ ಚಂದ್ರಶೇಖರ ಗುರೂಜಿ ಸರಳ ವಾಸ್ತು ಹೆಸರಿನಲ್ಲಿ ನೂರಾರು ಕುಟುಂಬಕ್ಕೆ ಆಧಾರವಾಗಿದ್ದರು. ಅದೆಷ್ಟೋ ಯುವಕರಿಗೆ ಉದ್ಯೋಗ ನೀಡುವ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಿಸಿದ್ದರು. ಆದರೆ ಇಂದು ಅವರು ಏಕಾಏಕಿ ಕೊಲೆಯಾಗಿರುವುದು ಸಿಬ್ಬಂದಿಯ ಕಣ್ಣೀರಿಗೆ ಕಾರಣವಾಗಿದೆ.
ಇನ್ನೂ ಚಿಕ್ಕಪ್ಪನ ಮುಖ ನೋಡಲು ಬಂದ ಶಿವಪುತ್ರಪ್ಪನವರ ಮಗ ಸಂಜಯ ಕಣ್ಣೀರಿನಲ್ಲಿಯೇ ಕೈ ತೊಳೆದಿದ್ದಾನೆ. ಈಗಾಗಲೇ ಕುಟುಂಬದವರು ಹಾಗೂ ಸಿಬ್ಬಂದಿ ಸುರಿಯುತ್ತಿರುವ ಮಳೆಯಲ್ಲಿಯೇ ಕಾಯುತ್ತಿರುವುದು ನಿಜಕ್ಕೂ ಚಂದ್ರಶೇಖರ ಗುರೂಜಿ ಅಗಲಿಕೆಯ ನೋವನ್ನು ಅರ್ಥೈಸುವಂತಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
05/07/2022 08:21 pm