ಹುಬ್ಬಳ್ಳಿ: ಇಲ್ಲಿನ ಸುತಗಟ್ಟಿ ಕಾನೂನು ವಿಶ್ವವಿದ್ಯಾಲಯ ಬಳಿ ಮಂಗಳವಾರ ರಾತ್ರಿ ಕೆಎಸ್‌ಆರ್‌ಪಿ ಕಾನ್‌ಸ್ಟೇಬಲ್ ಇಸ್ಮಾಯಿಲ್‌ಸಾಬ್ ಕಿಲ್ಲೇದಾರ ಅವರ ಕತ್ತು ಹಿಸುಕಿ ಹತ್ಯೆಗೈದಿದ್ದು ಅವರ ಮಕ್ಕಳೇ ಎಂಬುದು ಪೊಲೀಸರ ತನಿಖೆಯಿಂದ ಬಹಿರಂಗಗೊಂಡಿದೆ.
ಹೌದು..ಆತನ ಇಬ್ಬರು ಮಕ್ಕಳು ಸೇರಿದಂತೆ ಐವರನ್ನು ಎಪಿಎಂಸಿ ನವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇಸ್ಮಾಯಿಲ್‌ಸಾಬನ ಪುತ್ರ ಫಕುಸಾಬ ಕಿಲ್ಲೇದಾರ, ಆತನ ಸ್ನೇಹಿತರಾದ ಶಿವಮೊಗ್ಗ ಜಿಲ್ಲೆಯ ಈಶ್ವರ ಅರಿಕಟ್ಟಿ, ಶಿವಕುಮಾರ ಆರಿಕಟ್ಟಿ,ರೋಹನ್ ಕರಾ, ಇಸ್ಮಾಯಿಲ್ ಸಾಬನ ಪುತ್ರಿ, ಗದಗ ಹುಡ್ಕೋ ನಿವಾಸಿ ದಾವಲಮುನ್ನಿ ಕಾಲೇಖಾನ್ ಬಂಧಿತ ಆರೋಪಿಗಳು.
ನವನಗರ ಕೆಸಿಸಿ ಬ್ಯಾಂಕ್ ಕಾಲನಿಯ ಲಕ್ಷ್ಮೀ ಹೈಟ್ಸ್ ಅಪಾರ್ಟ್ ಮೆಂಟ್ ನಿವಾಸಿ, ಇಲ್ಲಿನ ರಾಯಾಪುರ ಕೆಎಸ್‌ಆರ್‌ಪಿ ಕಾನ್‌ಸ್ಟೆಬಲ್ ಇಸ್ಮಾಯಿಲ್‌ಸಾಬ ಕಿಲ್ಲೇದಾರ (54) ಅವರ ಪತ್ನಿ ಇತ್ತೀಚೆಗೆ ಮೃತಪಟ್ಟಿದ್ದರು. ಅವರಿಗೆ ಓರ್ವ ಪುತ್ರ, ಪುತ್ರಿ ಇದ್ದಾರೆ. ಈ ನಡುವೆ ಇಸ್ಮಾಯಿಲ್‌ಸಾಬ್ ಎರಡನೇ ಮದುವೆಯಾಗಿದ್ದರು. ಆ ಮಹಿಳೆ ತಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಇಸ್ಮಾಯಿಲ್‌ಸಾಬ್ ಅವರ ಮಕ್ಕಳು ಆಕ್ರೋಶಗೊಂಡಿದ್ದರು. ಇದೇ ಕಾರಣಕ್ಕೆ ತಂದೆಯ ಜತೆ ಜಗಳವಾಡಿ ಕತ್ತು ಹಿಸುಕಿ ಕೊಲೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿಸಿಪಿ ಸಾಹಿಲ್ ಬಾಗ್ಲಾ, ಎಸಿಪಿ ವಿನೋದ ಮುಕ್ತೇದಾರ ಮಾರ್ಗದರ್ಶನದಲ್ಲಿ ಎಪಿಎಂಸಿ ನವನಗರ ಠಾಣೆ ಇನ್‌ಸ್ಪೆಕ್ಟರ್ ಬಾಲು ಮಂಟೂರ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
01/07/2022 09:02 am