ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯಲ್ಲಿ ಮತ್ತೆ ನೆತ್ತರು ಹರಿದಿದೆ. ಆಟೋ ಓಡಿಸಿಕೊಂಡಿದ್ದ ವ್ಯಕ್ತಿಯ ಕೊಲೆಯಾಗಿದ್ದು, ಈ ಕೊಲೆಯ ಹಿಂದೆ ಹತ್ತಾರು ಊಹಾಪೋಹಗಳು ಹರಿದಾಡುತ್ತಿವೆ. ಕೊಲೆಯ ಹಿಂದೆ ವೈಯಕ್ತಿಕ ದ್ವೇಷ, ಅಕ್ರಮ ಸಂಬಂಧದ ವಾಸನೆ ಬರುತ್ತಿದೆ. ಪೊಲೀಸರು ಕೊಲೆಗೆ ನೈಜ ಕಾರಣ ತಿಳಿಯಲು ಪ್ರಕರಣದ ಬೆನ್ನು ಹತ್ತಿದ್ದಾರೆ.
ಒಂದು ಕಡೆ ಕುಟುಂಬಸ್ಥರ ಆಕ್ರಂದನ. ಇನ್ನೊಂದೆಡೆ ಪತಿಯನ್ನು ಕಳೆದುಕೊಂಡು ಎಂದು ಸಂಕಟ ಪಡುತ್ತಿರುವ ಹೆಂಡತಿ. ಇಷ್ಟೆಲ್ಲ ದೃಶ್ಯಗಳು ಕಂಡು ಬಂದಿದ್ದು ಹುಬ್ಬಳ್ಳಿಯ ಕಿಮ್ಸ್‌ನಲ್ಲಿ. ನಿನ್ನೆ (ಗುರುವಾರ) ತಡರಾತ್ರಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಧಾರವಾಡ ಕಾಲೋನಿಯಲ್ಲಿ ಮತ್ತೆ ನೆತ್ತರು ಹರಿದಿದೆ. ಚಂದ್ರಶೇಖರ ಎಂಬ ಯುವಕ ಕೊಲೆಯಾಗಿ ಪ್ರಾಣ ಕಳೆದುಕೊಂಡಿದ್ದಾನೆ.
ಕಿರಣ ಭಜಂತ್ರಿ ಹಾಗೂ ಅಭಿಷೇಕ್ ಭಜಂತ್ರಿ ಎಂಬ ಯುವಕರು, ತಮ್ಮ ತಂಗಿಗೆ ತೊಂದರೆ ನೀಡುತ್ತಿದ್ದ ಎಂಬ ಕಾರಣಕ್ಕಾಗಿ ಅದೇ ಏರಿಯಾದ ಚಂದ್ರಶೇಖರ್ ಎಂಬ ಆಟೋ ಚಾಲಕನನ್ನು ಕೊಲೆ ಮಾಡಿದ್ದಾರೆ. ಚಂದ್ರಶೇಖರ್ ಕಳೆದ ಹಲವಾರು ದಿನಗಳಿಂದ ಕಿರಣ್ ಮತ್ತು ಅಭಿಷೇಕ ತಂಗಿಗೆ ಕರೆ ಮಾಡಿ ಪೀಡಿಸುತ್ತಿದ್ದ ಎನ್ನಲಾಗಿದೆ. ಸದ್ಯ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಇದು ವೈಯಕ್ತಿಕ ದ್ವೇಷಕ್ಕಾಗಿ ನಡೆದ ಕೊಲೆ ಎನ್ನುವ ಆರೋಪ ಕೇಳಿ ಬರುತ್ತಿದೆ.
ಮತ್ತೊಂದು ಕಡೆ ಚಂದ್ರಶೇಖರ್ ಹಿನ್ನಲೆ ಅನುಮಾನ ಹುಟ್ಟಿಸುವಂತಿದೆ. ವೈಯಕ್ತಿಕ ದ್ವೇಷಕ್ಕೆ ಸಂಬಂಧಿಕರೇ ಕೊಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಇನ್ನು ಪ್ರಕರಣದ ಬೆನ್ನು ಹತ್ತಿರುವ ಖಾಕಿಪಡೆ ಈಗಾಗಲೇ ಕಿರಣ್ ಮತ್ತು ಅಭಿಷೇಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆದರೆ ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಹತ್ಯೆಯ ಸಂಚಿನ ಬಗ್ಗೆ ಸ್ಪಷ್ಟತೆಯಿಲ್ಲ ಹತ್ತಾರು ಆಯಾಮದಲ್ಲಿ ಪ್ರಕರಣವನ್ನು ತನಿಖೆ ಮಾಡುತ್ತಿದ್ದೇವೆ ಎಂಬುದು ಹುಬ್ಬಳ್ಳಿ ಪೊಲೀಸರ ಮಾತು.
ಒಟ್ಟಿನಲ್ಲಿ ಇಷ್ಟಪಟ್ಟು ಮದುವೆಯಾಗಿ ಸುಂದರ ಬದುಕನ್ನು ಕಟ್ಟಿಕೊಳ್ಳಬೇಕಿದ್ದ ಆಟೋ ಚಾಲಕ ಚಂದ್ರು, ತನ್ನ ಕೆಟ್ಟ ಜೀವನ ಶೈಲಿಯಿಂದ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದಾನೆ. ಇನ್ನು ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಇಲ್ಲಸಲ್ಲದ ಕಾರಣಗಳಿಗೆ ನೆತ್ತರು ಹರಿಯುತ್ತಿದೆ. ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ ಎನ್ನುವುದಕ್ಕೆ ಈ ಪ್ರಕರಣ ಮತ್ತೊಂದು ಉದಾಹರಣೆಯಾಗಿದೆ.
-ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ.
Kshetra Samachara
24/06/2022 04:55 pm