ಧಾರವಾಡ: ಆತ ಕೃಷಿಕ, ಪ್ರಸಕ್ತ ವರ್ಷ ಮೆಣಸಿನಕಾಯಿ ಬೆಳೆಯಲ್ಲಿ ಸಾಕಷ್ಟು ಲಾಭ ಕೂಡ ಪಡೆದುಕೊಂಡಿದ್ದ. ಸುಖೀ ಸಂಸಾರ. ಆದರೆ, ಈ ಸಂಸಾರ ಬಹಳ ದಿನ ಸುಖದಿಂದ ನಡೆಯೋದಕ್ಕೆ ವಿಧಿ ಬಿಡಲೇ ಇಲ್ಲ.
ಹೀಗೆ ನಿರ್ಜನ ಪ್ರದೇಶದ ಹೊಲದ ರಸ್ತೆಯಲ್ಲಿ ಹೆಣವಾಗಿ ಮಲಗಿರುವ ವ್ಯಕ್ತಿಯ ಹೆಸರು ಪ್ರಕಾಶ ದೇಶದ. ಮೂಲತಃ ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದವರು. ಕವಲಗೇರಿ ರಸ್ತೆಯಲ್ಲಿ ಕೃಷಿ ಜಮೀನು ಹೊಂದಿದ್ದ ಪ್ರಕಾಶ, ಇಂದು ಬೆಳಿಗ್ಗೆ ಹೊಲಕ್ಕೆ ಹೋಗಿ ಹಾಗೇ ಧಾರವಾಡಕ್ಕೆ ಹೋಗಿ ಬರುತ್ತೇನೆ ಅಂತಾ ಮನೆಯಲ್ಲಿ ಹೇಳಿ ಹೋಗಿದ್ದ. ಹೀಗೆ ಮನೆಯಿಂದ ಹೊರ ಹೋಗಿದ್ದ ಪ್ರಕಾಶ, ಕೆಲವೇ ಗಂಟೆಗಳಲ್ಲಿ ನಿರ್ಜನ ಪ್ರದೇಶದ ರಸ್ತೆಯಲ್ಲಿ ಬರ್ಬರವಾಗಿ ಹತ್ಯೆಗೀಡಾಗಿದ್ದ. ಈ ವಿಷಯ ತಿಳಿದ ಆತನ ಕುಟುಂಬಸ್ಥರಿಗೆ ಬರ ಸಿಡಿಲು ಬಡಿದಂತಾಗಿತ್ತು.
ಪ್ರಕಾಶ ಯಾರ ಜೊತೆಗೂ ಜಗಳವಾಡಿರಲಿಲ್ಲ. ಹೊಲಕ್ಕೆಂದು ಬಂದು ಹೆಣವಾಗಿದ್ದಾನೆ. ಯಾರು ಈ ಹತ್ಯೆ ಮಾಡಿದವರು ಅನ್ನೋದನ್ನ ಪೊಲೀಸರು ಪತ್ತೆ ಮಾಡಬೇಕಿದೆ. ಇದಕ್ಕೆ ಆಸ್ತಿ ವಿವಾದ ಕಾರಣವೋ ಏನೋ ಗೊತ್ತಿಲ್ಲ. ಹತ್ಯೆ ಮಾಡಿದವರು ಯಾರು ಅನ್ನೋದು ನಮಗೂ ಗೊತ್ತಿಲ್ಲ ಅಂತಾ ಪ್ರಕಾಶನ ಸಹೋದರ ತಿಳಿಸಿದ್ರು.
ಪ್ರಕಾಶ ಬೈಕ್ ಮೇಲೆ ಬರುತ್ತಿದ್ದ ಸಂದರ್ಭದಲ್ಲಿ ಆತನ ಮೇಲೆ ಎರಡ್ಮೂರು ಜನ ಏಕಾಏಕಿ ದಾಳಿ ನಡೆಸಿದ್ದಾರೆ. ಮೊದಲು ಬರ್ಚಿಯಿಂದ ಹಲ್ಲೆ ಮಾಡಿದ ದುಷ್ಕರ್ಮಿಗಳು ಆನಂತರ ಕಲ್ಲಿನಿಂದ ಜಜ್ಜಿ ಪರಾರಿಯಾಗಿದ್ದಾರೆ. ಸ್ಥಳದಲ್ಲೆ ಹತ್ಯೆಗೆ ಬಳಸಲಾದ ಬರ್ಚಿ ಕೂಡ ಪತ್ತೆಯಾಗಿದೆ.
ಈ ಹತ್ಯೆಗೆ ಕಾರಣ ಏನು? ಹತ್ಯೆ ಮಾಡಿದವರು ಯಾರು ಎಂಬುದು ಇನ್ನೂ ನಿಗೂಢವಾಗಿದೆ. ಸ್ಥಳಕ್ಕೆ ಶ್ವಾನದಳದವರೂ ಬಂದು ಪರಿಶೀಲನೆ ನಡೆಸಿದರು. ಹತ್ಯೆಗೀಡಾದ ಪ್ರಕಾಶನ ತಾಯಿ, ಹೆಂಡತಿ, ಮಕ್ಕಳು ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಸದ್ಯ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಗ್ರಾಮೀಣ ಠಾಣೆ ಪೊಲೀಸರು ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ.
-ಪ್ರವೀಣ ಓಂಕಾರಿ, ಪಬ್ಲಿಕ್ ನೆಕ್ಸ್ಟ್, ಧಾರವಾಡ.
Kshetra Samachara
11/05/2022 07:19 am