ಹುಬ್ಬಳ್ಳಿ: ಅದು ನಿಜಕ್ಕೂ ಪೊಲೀಸ್ ಇಲಾಖೆಗೆ ತಲೆನೋವಾಗಿರುವ ಪ್ರಕರಣ. ಕೂಲ್ ಆಗಿ ನಿಭಾಯಿಸಬೇಕು ಎಂದುಕೊಂಡಿದ್ದವರಿಗೆ ಶಾಕ್ ಆಗಿದೆ. ಹುಬ್ಬಳ್ಳಿಯ ಬೆಂಕಿಯನ್ನು ನಂದಿಸಲು ಚಿಂತನೆ ನಡೆಸಿದ ಪೊಲೀಸರಿಗೆ ಏಜೆನ್ಸಿಯೊಂದರ ಹೊಣೆಗೇಡಿತನದಿಂದ ಕೈ ಸುಟ್ಟಂತಾಗಿದೆ. ಹಾಗಿದ್ದರೇ ಏನಿದು ಪ್ರಕರಣ..? ಖಾಸಗಿ ಏಜೆನ್ಸಿ ಮಾಡಿದ ಪ್ರಮಾದವಾದರೂ ಏನು ಅಂತೀರಾ ಇಲ್ಲಿದೆ ನೋಡಿ ಎಕ್ಸಕ್ಲೂಸಿವ್ ಸ್ಟೋರಿ...
ಸುಮಾರು ಇಪ್ಪತ್ತಕ್ಕೂ ಹೆಚ್ಚು ವರ್ಷಗಳ ಕಾಲ ಶಾಂತಿ ಸೌಹಾರ್ದತೆಯಿಂದ ಕೂಡಿದ್ದ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಕೋಮುಗಲಭೆ ಸೃಷ್ಟಿಯಾಗಿದ್ದು, ವೀಡಿಯೋ ಪೋಸ್ಟ್ ಆದ ಬೆನ್ನಲ್ಲೇ ದೊಡ್ಡಮಟ್ಟದ ಹಿಂಸಾಚಾರ ನಡೆದಿದೆ. ಈ ಹಿಂಸಾಚಾರ ಪ್ರಕರಣಕ್ಕೆ ಬ್ರೇಕ್ ಹಾಕಿ ತಪ್ಪಿತಸ್ಥರ ಹೆಡೆಮುರಿ ಕಟ್ಟಲು ನಿರ್ಧಾರ ಮಾಡಿದ್ದ ಪೊಲೀಸರಿಗೆ ಈಗ ತಲೆನೋವಾಗಿದೆ. ಹೌದು..ಮೊನ್ನೆ ರಾತ್ರಿ ಹಳೆ ಹುಬ್ಬಳ್ಳಿಯ ಪೊಲೀಸ್ ಠಾಣೆ ಆವರಣದಲ್ಲಿ ನಡೆದ ಕಲ್ಲು ತೂರಾಟ ಹಿಂಸಾಚಾರ ಪ್ರಕರಣದ ಆರೋಪಿಗಳ ಪತ್ತೆ ಕಾರ್ಯ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಸಿಸಿಟಿವಿ ಫೂಟೇಜ್ ಸಹಾಯದಿಂದ ಪುಂಡರ ಬಂಧನಕ್ಕೆ ಪ್ಲ್ಯಾನ್ ಮಾಡಿಕೊಂಡಿದ್ದ ಪೊಲೀಸರಿಗೆ ಈಗ ಶಾಕ್ ಆಗಿದ್ದು, 2000 ಜನರ ಪೈಕಿ ಈವರೆಗೆ ಕೇವಲ 88ಜನರ ಬಂಧನ ಮಾಡಲಾಗಿದೆ. ಸಿಸಿಟವಿ ಇದ್ದರೂ ಫೂಟೇಜ್ ಇಲ್ಲದಿರುವುದೇ ಪೊಲೀಸ್ ಆತಂಕಕ್ಕೆ ಕಾರಣವಾಗಿದೆ. ಹಳೇ ಹುಬ್ಬಳ್ಳಿ ಯ ಸುತ್ತಮುತ್ತ ಅಳವಡಿಸಿದ್ದ 48 ಕ್ಯಾಮೆರಾಗಳ ಪೈಕಿ 21 ಮಾತ್ರ ಕಾರ್ಯ ನಿರ್ವಹಿಸ್ತಿವೆ. 48 ಕ್ಯಾಮೆರಾ ಪೈಕಿ 7 ಕ್ಯಾಮೆರಾ ನಾಪತ್ತೆಯಾಗಿದ್ದು,20 ಕ್ಯಾಮೆರಾ ನಿಷ್ಕ್ರಿಯಗೊಂಡಿವೆ. ಇದರಿಂದ ಆರೋಪಿಗಳ ಬಂಧನದ ಕಾರ್ಯಕ್ಕೆ ಅಡ್ಡಿ ಉಂಟಾಗಿದೆ.
ಇನ್ನೂ ಸಿಸಿಟಿವಿ ಕ್ಯಾಮೆರಾ ನಿರ್ವಹಣೆ ಹೊಣೆ ಹೊತ್ತ ವರ್ಟಿಕ್ಸ್ ಏಜೆನ್ಸಿಯ ಹೊಣೆಗೇಡಿತನದಿಂದ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ಪೇಚಿಗೆ ಸಿಲುಕಿದಂತಾಗಿದೆ. ಸಾಕ್ಷ್ಯಾಧಾರ ಇಲ್ಲದೇ ಕೈ ಕೈ ಹಿಸುಕಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಏಜೆನ್ಸಿಯ ಹೊಣೆಗೇಡಿತನದಿಂದ ಈಗ ಇಂತಹದೊಂದು ಪ್ರಕರಣವನ್ನು ಬೇಧಿಸಲು ಪೊಲೀಸ್ ಇಲಾಖೆ ಪರದಾಡುವಂತಾಗಿದೆ. ರಾತ್ರಿ ವೇಳೆ ನಡೆದ ದೊಡ್ಡಮಟ್ಟದ ಗಲಾಟೆಯ ಸಾಕ್ಷಿಯನ್ನು ಏಳೆಏಳೆಯಾಗಿ ಬಿಚ್ಚಿಟ್ಟು ಆರೋಪಿಗಳ ಹೆಡೆಮುರಿ ಕಟ್ಟಲು ಸಹಾಯವಾಗಬೇಕಿದ್ದ ಸಿಸಿಟಿವಿಯ ಅವಾಂತರದಿಂದ ಈಗ ಪೊಲೀಸರಿಗೆ ತಲೆನೋವಾಗಿದೆ.
ಒಟ್ಟಿನಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಪೊಲೀಸ್ ಇಲಾಖೆಗೆ ವಿಘ್ನಗಳು ಎದುರಾಗುತ್ತಿದೆ. ಏಜೆನ್ಸಿಯ ಅವ್ಯವಸ್ಥಿತ ನಿರ್ವಹಣೆಯಿಂದ ಈಗ ಪೊಲೀಸರು ಪೇಚಿಗೆ ಸಿಕ್ಕಿ ಹಾಕಿಕೊಳ್ಳುವಂತಾಗಿದ್ದು, ಇನ್ನಾದರೂ ಸಿಸಿಟಿವಿ ಹಾಗೂ ವಾಚ್ ಟವರ್ ಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕಿದೆ.
Kshetra Samachara
18/04/2022 01:40 pm