ಹುಬ್ಬಳ್ಳಿ: ಅದು ಹೆಸರಿಗೆ ಮಾತ್ರ ಛೋಟಾ ಮುಂಬೈ. ಆದರೆ, ಆ ನಗರದಲ್ಲಿ ಹಿಂದೂ- ಮುಸ್ಲಿಮರು ಭಾಯಿ ಭಾಯಿ ಹಾಗೇ ಇದ್ದರು. ಆ 14 ಸೆಕೆಂಡ್ಸ್ ವೀಡಿಯೊ ಇಷ್ಟು ದಿನದ ಸೌಹಾರ್ದತೆಗೆ ಕೊಡಲಿ ಪೆಟ್ಟು ಕೊಟ್ಟಿದೆ. ಆ ಯುವಕನ ಅಚಾತುರ್ಯಕ್ಕೆ ನಗರಕ್ಕೆ ನಗರವೇ ಹೊತ್ತಿ ಉರಿದಿದೆ.
ನಿನ್ನೆಯಷ್ಟೇ ಎಲ್ಲರೂ ಊಟ ಮಾಡಿ ನೆಮ್ಮದಿಯಾಗಿ ನಿದ್ರೆ ಮಾಡುವ ಸಮಯ. ಏಕಾಏಕಿ ಕಲ್ಲು ತೂರಾಟ, ಚೀರಾಟ, ಆಕ್ರೋಶದ ಕೂಗು. ಅಭಿಷೇಕ ಹಿರೇಮಠ ಎಂಬ ಯುವಕ, ಮೆಕ್ಕಾ ಮಸೀದಿ ಮೇಲೆ ಎಡಿಟ್ ಮಾಡಿ ಹಾಕಿದ ಕೇಸರಿ ಧ್ವಜದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದೇ ತಡ, ಇಷ್ಟು ದಿನದ ಸೌಹಾರ್ದತೆಯ ಗೋಪುರಕ್ಕೆ ಬೆಂಕಿಯನ್ನೇ ಹಚ್ಚಿದಂತಾಯಿತು!
ಶ್ರೀರಾಮ ನವಮಿ- ಹನುಮ ಜಯಂತಿಯಂದು ಮುಸ್ಲಿಮರು ಪಾನೀಯ ಹಂಚುವ ಕೈಂಕರ್ಯ ನೋಡಿದ್ದೇವೆ. ರಂಜಾನ್- ಮೊಹರಂ ದಿನದಂದು ಹಿಂದೂಗಳೂ ಮುಸ್ಲಿಮರ ಜತೆಗೂಡಿ ಸಂಭ್ರಮಿಸುವ ಅದೆಷ್ಟೋ ಘಟನೆಗಳನ್ನು ಆ ಒಂದು ಪೋಸ್ಟ್ ಸುಟ್ಟು ಹಾಕಿರುವುದು ನಿಜಕ್ಕೂ ವಿಪರ್ಯಾಸ. ಇಷ್ಟು ದಿನ ಹೆಗಲ ಮೇಲೆ ಕೈ ಹಾಕಿಕೊಂಡು ಸುತ್ತಾಡುತ್ತಿದ್ದವರು ಈಗ ದ್ವೇಷ ಕಟ್ಟಿಕೊಂಡು ಸುತ್ತಾಡುವಂತಾಗಿದೆ.
ಒಟ್ಟಿನಲ್ಲಿ ಯಾರೋ ಮಾಡಿದ ತಪ್ಪಿಗೆ ಇನ್ನಾರೋ ಸಂಕಷ್ಟ ಅನುಭವಿಸುವಂತಾಗಿದೆ. ಭಾರತ ವಿವಿಧತೆಯಲ್ಲಿ ಏಕತೆ ಸಾರುವ ರಾಷ್ಟ್ರವೆಂದು ಗೊತ್ತಿದ್ದರೂ ದುಷ್ಟ ಶಕ್ತಿಗಳು ಈಗ ಒಡೆದು ಆಳುವ ಕುಕೃತ್ಯಕ್ಕೆ ಮುಂದಾಗಿರುವುದು ದುರದೃಷ್ಟಕರ. ಇನ್ನಾದರೂ ಧರ್ಮ- ಜಾತಿ ವೈಷಮ್ಯದ ವಿಷ ಬೀಜ ಮರೆಯಾಗಿ, ಸಾಮರಸ್ಯ-ಸೌಹಾರ್ದತೆ ಮೆರೆಯಲಿ ಎಂಬುದು ʼಪಬ್ಲಿಕ್ ನೆಕ್ಸ್ಟ್ʼ ಆಶಯ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
17/04/2022 10:21 pm