ವಿಶೇಷ ಸ್ಟೋರಿ: ಶ್ರೀಧರ ಪೂಜಾರ
ಕುಂದಗೋಳ: ಯರಗುಪ್ಪಿ ಹೊರವಲಯದಲ್ಲಿ ಕುರಿಗಾಹಿ ಮಹಿಳೆ ಮೇಲೆ ಅತ್ಯಾಚಾರ ನಡೆಸಿ, ಬಳಿಕ ಕೊಲೆಗೈದ ಕಹಿ ಘಟನೆ ಮಾಸುವ ಮುನ್ನವೇ ದೇವನೂರು ದಾರಿಯ ಜಮೀನಿನಲ್ಲಿ ವಾಸವಾಗಿರುವ ಕುರಿಗಾಹಿಗಳಿಗೆ ಮತ್ತೊಂದು ದುರ್ಘಟನೆ ಭಯ ಹುಟ್ಟಿಸಿದೆ!
ಇಂದು ಎಂದಿನಂತೆ ಕುರಿ ಕಾಯಲು ಹೋದ ಕುರಿಗಾಹಿಗಳ ದಡ್ಡಿಗೆ ನುಗ್ಗಿದ ಕಳ್ಳನೊಬ್ಬ ಬರೋಬ್ಬರಿ 5 ಕುರಿಗಳ ಕಾಲಿಗೆ ಹಗ್ಗ ಕಟ್ಟಿ, ಕಳವಿಗೆ ಯತ್ನಿಸಿದಾಗ ಕುರಿಗಾಹಿಗಳ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ಇಂದು ಮಧ್ಯಾಹ್ನ 3ರ ಸುಮಾರಿಗೆ ಕುಂದಗೋಳ ಪಟ್ಟಣದಿಂದ ದೇವನೂರು ದಾರಿಗೆ ಸಂಪರ್ಕ ಕಲ್ಪಿಸುವ ಜಮೀನಿನಲ್ಲಿ ದಡ್ಡಿ ಹಾಕಿದ ಕುರಿಗಾಹಿಗಳ ಹಿಂಡಿ ನುಗ್ಗಿದ ಈ ಐನಾತಿ ಕಳ್ಳ 5 ಕುರಿಗಳನ್ನು ಲಪಟಾಯಿಸಲು ಹೊಂಚು ಹಾಕಿ, ಕುರಿಗಳು ವಿಲಿ ವಿಲಿ ಒದ್ದಾಡುವಂತೆ ಕಾಲುಗಳಿಗೆ ಹಗ್ಗ ಬಿಗಿದು, ಕುರಿ ಒದರದಂತೆ ಬಾಯಿಗೆ ಮುಳ್ಳು ಚುಚ್ಚಿದ್ದಾನೆ.
ತಕ್ಷಣ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಕುಂದಗೋಳ ಗ್ರಾಮೀಣ ಪೊಲೀಸರು ಕಳ್ಳನನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ.
ಆದರೆ, ಈ ಕುರಿಗಾಹಿಗಳು ನಮಗೆ ರಕ್ಷಣೆ ಎಲ್ಲಿದೆ ಸ್ವಾಮಿ ? ಮೊನ್ನೆ ತಾನೇ ಕುರಿಗಾಹಿ ಮಹಿಳೆಯ ಅತ್ಯಾಚಾರ, ಕೊಲೆಯಾಯಿತು. ಇದರ ಬೆನ್ನಲ್ಲೇ ಕುರಿಗಾಹಿ ಯುವಕನೊಬ್ಬ ಹಿರೇಹಕುಣಿಯಲ್ಲಿ ಸಿಡಿಲಿಗೆ ಬಲಿಯಾದ. ಈ ಮಧ್ಯೆ ಕುಂದಗೋಳ ತಾಲೂಕಿನ ಬೆಟದೂರು ಗ್ರಾಮದಲ್ಲಿ 50ಕ್ಕೂ ಹೆಚ್ಚು ಕುರಿಮರಿಗಳು ಶ್ವಾನ ದಾಳಿಗೆ ತುತ್ತಾಗಿ ಪ್ರಾಣ ಬಿಟ್ಟಿವೆ.
ಈ ಎಲ್ಲ ದುರ್ಘಟನೆಗಳು ಕಾಡು ಕುರಿಗಾಹಿಗಳ ಮನಸ್ಸನ್ನು ಹಿಂಡಿ ಹಿಪ್ಪೆ ಮಾಡಿದ್ದರೂ ಹಾಲು ಮನಸಿನ ಕುರುಬ ಏನು ತಿಳಿಯದಂತೆ ಮೌನಕ್ಕೆ ಶರಣಾಗಿದ್ದಾನೆ. ಇದರ ನಡುವೆ ಕುರಿ ಕಟ್ಟಿ ಹಾಕಿ ಕಳ್ಳತನಕ್ಕೆ ಯತ್ನಿಸಿದ ವ್ಯಕ್ತಿ ಮಾನಸಿಕ ಅಸ್ವಸ್ಥ ಆತನ ಬುದ್ಧಿ ಮಟ್ಟ ಸರಿಯಿಲ್ಲಾ ಎಂದು ಗ್ರಾಮಸ್ಥರು ಹಾಗೂ ಕುರಿ ಕಳ್ಳತನಕ್ಕೆ ಯತ್ನಿಸಿದ ವ್ಯಕ್ತಿ ಕುಟುಂಬಸ್ಥರು ಹೇಳುತ್ತಿದ್ದು ಪ್ರಕರಣಕ್ಕೆ ಪೊಲೀಸರೇ ಸೂಕ್ತ ನಿರ್ಣಯ ನೀಡಬೇಕಿದೆ.
Kshetra Samachara
08/04/2022 11:20 pm