ಗದಗ: ಆತ ವಿಚಾರಣಾಧೀನ ಖೈದಿಯಾಗಿದ್ದ. ಇನ್ನೂ ಚಿಗರು ಮೀಸೆಯ ಯುವಕ. ಮಾಡಿದ ತಪ್ಪನ್ನು ತಿದ್ದಿಕೊಂಡು ಬದುಕಲು ಸಾಕಷ್ಟು ಸಮಯ ಇತ್ತು. ಮಗನ ಸುಧಾರಿಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳುತ್ತಾನೆ ಎಂದುಕೊಂಡಿದ್ದ ಹೆತ್ತವರಿಗೆ ಶಾಕ್ ಆಗಿದೆ. ಹಾಗಿದ್ದರೇ ಯಾರು ಆ ಯುವಕ.? ಅಲ್ಲಿ ಆಗಿದ್ದಾದರೂ ಏನು ಅಂತೀರಾ.? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ.
ಹೀಗೆ ಜಿಲ್ಲಾ ಕಾರಾಗೃಹದ ಮುಂದೆ ಕಣ್ಣೀರು ಹಾಕುತ್ತಿರುವ ಹೆತ್ತವರು. ಮಗ ರಿಲೀಸ್ ಆಗಿ ಬರುತ್ತಾನೆ ಎಂದು ಕಾಯುತ್ತಿದ್ದವರು ಮಗನ ಶವ ಒಯ್ಯುವ ಸ್ಥಿತಿ. ಇದೆಲ್ಲದಕ್ಕೂ ಸಾಕ್ಷಿಯಾಗಿದ್ದು ಮಾತ್ರ ಗದಗ ಜಿಲ್ಲೆಯ ಜಿಲ್ಲಾ ಕಾರಾಗೃಹ. ಹೌದು. ಜಾಮೀನು ಸಿಕ್ಕ ಮಾಹಿತಿ ಸರಿಯಾದ ಸಮಯಕ್ಕೆ ಸಿಗದೆ ಗದಗ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪೋಕ್ಸೋ ಕೇಸ್ ಅಡಿ ವಿಚಾರಣಾಧೀನ ಖೈದಿಯಾಗಿದ್ದ ರಾಜು ಲಮಾಣಿ (19) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗದಗ ತಾಲೂಕಿನ ಅಡವಿ ಸೋಮಾಪುರ ತಾಂಡಾದ ನಿವಾಸಿಯಾಗಿರುವ ರಾಜು ಶುಕ್ರವಾರ ಮಧ್ಯರಾತ್ರಿ 1:30ರ ಸುಮಾರಿಗೆ ಕಾರಾಗೃಹದಲ್ಲಿನ ಬ್ಯಾರೆಕ್ ಕಿಟಕಿ ಸರಳಿಗೆ ಟವೆಲ್ ಸಹಾಯದಿಂದ ನೇಣು ಬಿಗಿದುಕೊಂಡಿದ್ದಾನೆ. ಮಾರ್ಚ್ 7 ಶನಿವಾರ ಜಾಮೀನು ಸಿಕ್ಕುತ್ತೆ ಅನ್ನೋ ನಿರೀಕ್ಷೆಯಲ್ಲಿ ಇದ್ದ ಯುವಕ. ಸಹ ಕೈದಿಗಳೊಂದಿಗೆ ಜಾಮೀನು ಸಿಗುತ್ತೆ, ಪಿಯುಸಿ ಪರೀಕ್ಷೆ ಬರೆಯಲು ರಿಲೀಸ್ ಆಗ್ತೀನಿ ಅಂತ ಹೇಳಿಕೊಂಡಿದ್ದ. ಆದರೆ ಜಾಮೀನು ನಿರೀಕ್ಷೆಯಲ್ಲೇ ಖಿನ್ನತೆಗೊಳಗಾಗಿದ್ದ ರಾಜು ಇದೇ ಚಿಂತೆಯಲ್ಲಿ ಸಹ ಕೈದಿಗಳ ಟವೆಲ್ ತೆಗೆದುಕೊಂಡು ಹಗ್ಗದ ಮಾದರಿಯಲ್ಲಿ ಜೋಡಿಸಿ ನೇಣು ಕುಣಿಕೆ ರೆಡಿ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಅಡವಿ ಸೋಮಾಪುರ ಗ್ರಾಮದ ರಾಜು ಪಾಂಡಪ್ಪ ಲಮಾಣಿ ಅಪ್ರಾಪ್ತೆಯನ್ನ ಪ್ರೀತಿಸಿದ್ದ. ಹುಡುಗಿ ಕಾಣೆಯಾಗಿದ್ದಾಳೆಂದು ಗ್ರಾಮೀಣ ಪೊಲೀಸ್ ಠಾಣೆ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣ ದಾಖಲಾದ 8 ದಿನಗಳ ಬಳಿಕ ಸಿಕ್ಕ ಹುಡುಗಿಯನ್ನು ಗ್ರಾಮೀಣ ಪೊಲೀಸ್ ಠಾಣೆಗೆ ಕರೆದುಕೊಂಡು ಹೇಳಿಕೆಯನ್ನು ದಾಖಲಿಸಿದ್ದಾರೆ. ಈ ಹೇಳಿಕೆಯಲ್ಲಿ ರಾಜು ನಾನು ಬೆಂಗಳೂರು, ಗೊವಾ ಹೋಗಿದ್ವಿ. ಹೋದಲ್ಲೆಲ್ಲಾ ಜೊತೆಗಿದ್ವಿ' ಎಂದು ಹೇಳಿದ್ಲಂತೆ. ನ್ಯಾಯಾಧೀಶರ ಎದುರು 'ನಾನು ಗೆಳತಿಯರೊಂದಿಗೆ ಹೋಗಿದ್ದೆ.. ಎಂದು ಮಾತು ಬದಲಿಸಿದ್ದಳು. ಆದರೂ ರಾಜು ಮೇಲೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದೆ. ರಾಜು ಲಮಾಣಿ ಪಿಯುಸಿ ವಿದ್ಯಾರ್ಥಿಯಾಗಿದ್ದು ಪರೀಕ್ಷೆ ಬರೆಯಬೇಕಿದ್ದು, ಆರೋಪಿಯ ವಿರುದ್ಧ ಅಂತಹ ಯಾವುದೇ ಗಂಭೀರ ಆರೋಪವಿಲ್ಲ. ಇದೊಂದು ಸುಳ್ಳು ಪ್ರಕರಣವಾಗಿದೆ ಎಂಬ ವಾದ ಮಂಡಿಸಿ ಜಾಮೀನಿಗೆ ಅರ್ಜಿಸಲ್ಲಿಸಲಾಗಿತ್ತು. ಗುರುವಾರ ಏಪ್ರಿಲ್ 7 ರಂದು 5.25ಕ್ಕೆ ಜಾಮೀನು ಆದೇಶವಾಗಿತ್ತು. ಆದರೆ, ನಿನ್ನೆ ನ್ಯಾಯಾಲಯದ ಸಮಯ ಮುಗಿದಿದ್ದರಿಂದ ಕಾರಾಗೃಹಕ್ಕೆ ಮಾಹಿತಿ ಬಂದಿರಲಿಲ್ಲ. ಆದರೆ ಆರೋಪಿಪರ ವಕೀಲ ಎಮ್.ಎ.ಮೌಲ್ವಿ ಕಾರಗೃಹದ ಲ್ಯಾಂಡ್ ಲೈನ್(0837-2246341) ಗೆ ಕರೆ ಮಾಡಿ ಮಾಹಿತಿ ನೀಡಲು ಪ್ರಯತ್ನಿಸಿದ್ರಂತೆ. ಆದರೆ ರಿಂಗ್ ಆಗೋ ಫೋನ್ ಕರೆ ಯಾರೂ ಸ್ವೀಕರಿಸಿರಲಿಲ್ಲ.. ಸಿಬ್ಬಂದಿಯೊಬ್ಬರಿಗೂ ಕಾಂಟ್ಯಾಕ್ಟ್ ಮಾಡಿ ಮಾಹಿತಿ ನೀಡುವ ಪ್ರಯತ್ನವನ್ನು ವಕೀಲ ಮೌಲ್ವಿ ಮಾಡಿದ್ದಾರೆ. ಆದರೆ, ಸಿಬ್ಬಂದಿ ಟ್ರೇನಿಂಗ್ ನಲ್ಲಿದ್ರಂತೆ.. ಹೀಗಾಗಿ ಜಾಮೀನು ವಿಷಯ ರಾಜೂ ವರೆಗೆ ಮುಟ್ಟಿರಲಿಲ್ಲ. ಇದರಿಂದ ಖಿನ್ನತೆಗೆ ಒಳಗಾಗಿ ಯುವಕ ಆತ್ಮಹತ್ಯೆ ದಾರಿ ಹಿಡಿದಿದ್ದಾನೆ.
ಜಾಮೀನು ಸಿಕ್ಕ ವಿಚಾರಾ ಸಮಯಕ್ಕೆ ಸರಿಯಾಗಿ ಸಿಕ್ಕಿದ್ದರೆ ರಾಜೂ ಆತ್ಮಹತ್ಯೆಯ ನಿರ್ಧಾರ ಮಾಡ್ತಿರಲಿಲ್ಲ ಅನ್ಸುತ್ತೆ.. ಕೇಸ್ ನಿಂದಾಗಿ ಜೀವನ ಹಾಳಾಯ್ತು ಅನ್ನೋ ಖಿನ್ನತೆಯಲ್ಲಿ ರಾಜೂ ತಪ್ಪು ನಿರ್ಧಾರ ಮಾಡಿದ್ದಾನೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
08/04/2022 10:54 pm