ಹುಬ್ಬಳ್ಳಿ: ಗ್ರಾಮದ ಅಭಿವೃದ್ಧಿ ಆಗಬೇಕು ಅಂದರೆ ಗ್ರಾಮೀಣ ಆಡಳಿತ ಚನ್ನಾಗಿಯೇ ಇರಬೇಕು. ನಮ್ಮ ಊರು ಉದ್ದಾರ ಆಗಲಿ ಅಂತ ಜನರು ವೋಟ್ ಹಾಕಿ ಅಧ್ಯಕ್ಷರನ್ನು ಆಯ್ಕೆ ಮಾಡಿದ್ದಾರೆ. ಆದರೆ ಬೇಲಿಯೇ ಎದ್ದು ಹೊಲ ಮೇಯ್ದಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಗ್ರಾಮದ ಪ್ರಥಮ ಪ್ರಜೆಯ ವಿರುದ್ಧವೇ ಅವ್ಯವಹಾರದ ಆರೋಪ ಕೇಳಿ ಬಂದಿದೆ. ಹಾಗಿದ್ದರೆ ಏನಿದು ಅವ್ಯವಹಾರ ಅಂತೀರಾ ಈ ಸ್ಟೋರಿ ನೋಡಿ.
ಗ್ರಾಮ ಪಂಚಾಯತಿ ಅಭಿವೃದ್ಧಿ ಹೆಸರಲ್ಲಿ ವಸ್ತುಗಳನ್ನು ಖರೀದಿಸದೇ ಗ್ರಾಮ ಪಂಚಾಯಿತಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಆರೋಪವೊಂದು ಕೇಳಿ ಬಂದಿದೆ. ಕಲಘಟಗಿ ತಾಲೂಕಿನ ಕುರುವಿನಕೊಪ್ಪ ಗ್ರಾಮ ಪಂಚಾಯತಿಯಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಬಸವರಾಜ ಪೂಜಾರಿ, ಪಿಡಿಒ ರವಿರಾಜ್ ಅವರ ವಿರುದ್ಧ ಅಕ್ರಮ ಆರೋಪ ಕೇಳಿ ಬಂದಿದೆ. ಅಸ್ತಿತ್ವದಲ್ಲಿ ಇಲ್ಲದ ಅಂಗಡಿಗಳ ಹೆಸರಲ್ಲಿ ವಸ್ತುಗಳನ್ನು ಖರೀದಿಸಿದಂತೆ ಲೆಕ್ಕ ತೋರಿಸಿ ವಂಚನೆ ಮಾಡಲಾಗಿದೆಯಂತೆ. ಗ್ರಾಮದ ಪ್ರಥಮ ಪ್ರಜೆ ಎನಿಸಿಕೊಂಡ ಗ್ರಾಮ ಪಂಚಾಯತ ಅಧ್ಯಕ್ಷ 15ನೇ ಹಣಕಾಸಿನ ಯೋಜನೆ ಅಡಿ ಅಕ್ರಮ ವ್ಯವಹಾರ ನಡೆಸಿ 18.33 ಲಕ್ಷ ರೂಪಾಯಿ ವಂಚನೆ ಮಾಡಿರುವ ಕುರಿತು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ಸೋರುವ ಪಂಚಾಯತಿ ಅಭಿವೃದ್ಧಿ ಮಾಡುವುದನ್ನು ಬಿಟ್ಟು ಚನ್ನಾಗಿರುವ ಸಮುದಾಯ ಭವನವನ್ನು ಕೆಡವಿ ಅವ್ಯವಸ್ಥೆ ಹುಟ್ಟು ಹಾಕಿದ್ದಾರೆ ಎಂಬುವುದು ಗ್ರಾಮಸ್ಥರ ಮಾತು.
ಪಂಚಾಯತ್ ಹಣದಲ್ಲಿ ಮಾಸ್ಕ್, ಸ್ಯಾನಿಟೈಸರ್, ಪೈಪ್ ಇತ್ಯಾದಿ ಖರೀದಿಸಿರೋದಾಗಿ ವಂಚನೆ ಮಾಡಿದ್ದು, ಒಟ್ಟು 18 ಲಕ್ಷ ರೂಪಾಯಿ ಅವ್ಯವಹಾರ ನಡೆದಿದೆ. ಅಲ್ಲದೆ 3 ಲಕ್ಷಕ್ಕೂ ಅಧಿಕ ಹಣ ಅಧ್ಯಕ್ಷರ ಬ್ಯಾಂಕ್ ಖಾತೆಗೆ ಅನಧಿಕೃತವಾಗಿ ಜಮಾ ಆಗಿದೆ. ಈ ಕುರಿತು ನಂತರದಲ್ಲಿ ಬಂದ ಗ್ರಾಮ ಪಂಚಾಯತ್ ಪಿಡಿಒ ಕಡೆಯಿಂದ ತನಿಖೆ ಮಾಡಿಸಲಾಗಿದೆ. ಸಾಮಾಗ್ರಿಗಳನ್ನು ಖರೀದಿ ಮಾಡದೆ ವಂಚಿಸಿರುವ ಕುರಿತು ಪಿಡಿಒ ವರದಿಯನ್ನೂ ನೀಡಿದ್ದಾರೆ. ಆದರೂ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತಿ ಸಿಇಒ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕೂಡಲೇ ಗ್ರಾಪಂ ಅಧ್ಯಕ್ಷನ ಸದಸ್ಯತ್ವ ರದ್ದು ಮಾಡಬೇಕು. ಅಕ್ರಮಕ್ಕೆ ಬೆಂಬಲವಾಗಿ ನಿಂತ ಪಿಡಿಒ ಅಮಾನತು ಗೊಳಿಸುವಂತೆ ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತ ಸ್ಥಿತಿ ಧಾರವಾಡ ಜಿಲ್ಲೆಯ ಕುರವಿನಕೊಪ್ಪದಲ್ಲಿ ನಿರ್ಮಾಣವಾಗಿದ್ದು, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಾನೂನು ಕ್ರಮಗಳನ್ನು ಜರುಗಿಸಬೇಕಿದೆ.
ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
29/03/2022 04:57 pm